ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಸಿಎಂ ಸಭೆ ಯಶಸ್ವಿ: ಮುಷ್ಕರ ವಾಪಸ್ ಪಡೆದ ವೈದ್ಯಾಧಿಕಾರಿಗಳು

ವಿವಿಧ ಬೇಡಿಕೆಗೆ ಆಗ್ರಹಿಸಿ ಕೈಗೊಂಡಿದ್ದ ಮುಷ್ಕರವನ್ನು ಬುಧವಾರ ವೈದ್ಯಧಿಕಾರಿಗಳು ಹಿಂಪಡೆದಿದ್ದಾರೆ...

Mainashree
Updated On : 29 Oct 2014, 6:22 am

ಬೆಂಗಳೂರು: ವಿವಿಧ ಬೇಡಿಕೆಗೆ ಆಗ್ರಹಿಸಿ ಕೈಗೊಂಡಿದ್ದ ಮುಷ್ಕರವನ್ನು ಬುಧವಾರ ವೈದ್ಯಧಿಕಾರಿಗಳು ಹಿಂಪಡೆದಿದ್ದಾರೆ.

ವೈದ್ಯಾಧಿಕಾರಿಗಳು ವಿವಿಧ ಬೇಡಿಕೆಗೆ ಆಗ್ರಹಿಸಿ ಸೋಮವಾರದಿಂದ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಸರ್ಕಾರ ಇದಕ್ಕೆ ಸರಿಯಾಗಿ ಪ್ರತಿಕ್ರಿಯಿಸದ ಹಿನ್ನಲೆಯಲ್ಲಿ ಸಾಮೂಹಿಕ ರಾಜಿನಾಮೆ ನೀಡಿದ್ದರು.

ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈದ್ಯಾಧಿಕಾರಿಗಳೊಂದಿಗೆ ಇಂದು ಸಂಜೆ ವಿಧಾನಸೌಧದಲ್ಲಿ ಸಭೆ ಕರೆದಿದ್ದರು. ಸಿದ್ದರಾಮಯ್ಯ ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು, ವೈದ್ಯರು ಇಟ್ಟಿದ್ದ 14 ಬೇಡಿಕೆಗಳಲ್ಲಿ 10 ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಸಮ್ಮತಿಸಿದೆ.

ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಸಚಿವ ಯು.ಟಿ ಖಾದರ್, ವೈದ್ಯರ ಬೇಡಿಕೆಗೆ ಸೂಕ್ತವಾಗಿ ಸರ್ಕಾರ ಸ್ಪಂದಿಸಿದೆ. ವೈದ್ಯರ ಬಹುತೇಕ ಬೇಡಿಕೆ ಈಡೇರಿಸಲು ಸರ್ಕಾರ ಸಮ್ಮತಿಸಿದೆ.

ಪ್ರತಿ ತಿಂಗಳ ಮೊದಲ ವಾರದಲ್ಲಿ ಜಿಲ್ಲಾ ಆಸ್ಪತ್ರೆ ಸಿಬ್ಬಂದಿಗೆ ವೇತನ ನೀಡಲಾಗುವುದು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಔಷಧಿ ಪೂರೈಕೆ ಮಾಡಲಾಗುವುದು. ಸ್ಥಾನಿಕ ವೈದ್ಯಾಧಿಕಾರಿಗಳನ್ನೇ ಜಿಲ್ಲಾ ಸರ್ಜನ್ ಆಗಿ ನೇಮಕಾತಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

3 ವರ್ಷ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿದ ವೈದ್ಯರನ್ನು ಖಾಯಂಗೊಳಿಸಲಾಗುವುದು. ಕೆಪಿಎಸ್‌ಸಿ ಮೂಲಕ ವೈದ್ಯರು, ನರ್ಸ್‌ಗಳ ನೇಮಕ. ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿದೆ ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿ ನೀಡಿದ ಸಿಎಂ ಸಿದ್ದರಾಮಯ್ಯ, ಇನ್ನೂ ಮುಂದೆ ವೈದ್ಯಾಧಿಕಾರಿಗಳು ಈ ರೀತಿ ಮುಷ್ಕರ ಕೈಗೊಳ್ಳಬಾರದು. ಏನೇ ಇದ್ದರೂ ಮಾತಿನ ಮೂಲಕ ಸಮಸ್ಯೆಯನ್ನು ಬಗೆಹರಿಸಿ. ಸಾರ್ವಜನಿಕರಿಗೆ ತೊಂದರೆಯಾಗದಂತೆ ನಡೆದುಕೊಳ್ಳಿ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement