ಮಹಿಳೆ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಪತಿ ಸೆರೆ
ನಂದಿನಿ ಲೇಔಟ್ನ ಶಂಕರನಗರದಲ್ಲಿ...
ಬೆಂಗಳೂರು: ನಂದಿನಿ ಲೇಔಟ್ನ ಶಂಕರನಗರದಲ್ಲಿ ನಡೆದಿದ್ದ ಮುದ್ದುಲಕ್ಷ್ಮಿ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಆಕೆಯ ಪತಿ ತಿಮ್ಮಯ್ಯನೇ ಕೊಲೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ದಂಪತಿ ನಡುವೆ ವೈಮನಸ್ಸಿದ್ದು ಆಗಾಗ ಜಗಳ ನಡೆಯುತ್ತಿದ್ದುದ್ದೇ ಕೊಲೆಗೆ ಕಾರಣ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಇಬಿ ನಿವೃತ್ತ ನೌಕರ ತಿಮ್ಮಯ್ಯ (62) ಪತ್ನಿಯೊಂದಿಗೆ ಕಳೆದ 35 ವರ್ಷಗಳಿಂದ ಶಂಕರನಗರದ 3 ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದರು. 40 ಸಾವಿರ ಬಾಡಿಗೆ ಮತ್ತು ಪಿಂಚಣಿ ಹಣದಲ್ಲಿ ದಂಪತಿ ಜೀವನ ನಡೆಸುತ್ತಿದ್ದರು. ಆದರೆ ಇವರ ಪುತ್ರಿ ಚಂದನಾ, ವರ್ತೂರಿನಲ್ಲಿರುವ ತಿಮ್ಮಯ್ಯ ಅವರ ಪೋಷಕರ ಜತೆ ವಾಸವಾಗಿದ್ದರು.
ಮುದ್ದುಲಕ್ಷ್ಮಿಯದ್ದೇ ಮನೆ ಯಜಮಾನಿಕೆಯಾಗಿತ್ತು. ಆಕೆ ಬಾಡಿಗೆ ಮತ್ತು ಪತಿಯ ಪಿಂಚಣಿಯನ್ನು ತಾನೇ ಇಟ್ಟುಕೊಳ್ಳುತ್ತಿದ್ದಳು. ಇದರಿಂದ 100 ರುಪಾಯಿಗೂ ತಿಮ್ಮಯ್ಯ ಪತ್ನಿಯ ಬಳಿ ಕೈ ಚಾಚಬೇಕಾಗಿತ್ತು. ಅಲ್ಲದೆ ಸಮಯಕ್ಕೆ ಸರಿಯಾಗಿ ಅಡುಗೆ ಮಾಡಿ ಬಡಿಸುತ್ತಿರಲಿಲ್ಲ. ಆದ್ದರಿಂದ ದಂಪತಿ ನಡುವೆ ಕಳೆದ ಏಳೆಂಟು ವರ್ಷದಿಂದ ವೈಮನಸ್ಸಾಗಿ ಜಗಳವಾಗುತ್ತಿತ್ತು. ಇದರಿಂದ ಪತಿ ಮಾನಸಿಕವಾಗಿ ನೊಂದು ಪತ್ನಿಯ ಹತ್ಯೆಗೆ ಮೂರು ತಿಂಗಳ ಹಿಂದೆ ಸಂಚು ರೂಪಿಸಿದ್ದ.
ಅ.27ರ ರಾತ್ರಿ 11.30ರಲ್ಲಿ ಮಹಡಿ ಮೇಲೆ ಮಳೆ ನೀರು ನಿಂತಿದೆ. ಅದನ್ನು ನೋಡಿ ಬರಲೆಂದು ಪತ್ನಿಯನ್ನು ಮಹಡಿ ಮೇಲೆ ಕರೆದುಕೊಂಡು ಹೋಗಿದ್ದಾನೆ. ಆಗ ಮುದ್ದುಲಕ್ಷ್ಮಿ ಕೆಳಗೆ ನೋಡುತ್ತಿದ್ದಾಗ ಮೇಲಿಂದ ತಳ್ಳಿ ಹತ್ಯೆ ಮಾಡಿದ್ದಾನೆ. ಘಟನೆಯಿಂದ ಭಯಗೊಂಡು ಒಂದೂವರೆ ತಾಸು ಮನೆಯಲ್ಲೇ ಕುಳಿತಿದ್ದ. ನಂತರ ಮನೆಯಿಂದ ಹೊರಬಂದು ಚರಂಡಿಯಲ್ಲಿ ಬಿದ್ದಿದ್ದ ಪತ್ನಿ ಶವವನ್ನು ರಸ್ತೆಗೆ ಎಳೆದು ಮೈ ಮೇಲಿದ್ದ ಆಭರಣ ತೆಗೆದುಕೊಂಡು ಮುಖವನ್ನು ಸೀರೆಯಿಂದ ಮುಚ್ಚಿದ್ದಾನೆ. ಮುಂಜಾನೆ 5 ಗಂಟೆಗೆ ವಾಯು ವಿಹಾರಕ್ಕೆ ಹೋಗಿ ನಂದಿನಿ ಲೇಔಟ್ ಠಾಣೆ ಹಿಂಭಾಗದ ಉದ್ಯಾನದಲ್ಲಿ ಆಭರಣ ಎಸೆದಿದ್ದ.
ಮಂಗಳವಾರ ಬೆಳಗ್ಗೆ ಮುದ್ದುಲಕ್ಷ್ಮಿ ದೇಹ ರಸ್ತೆಯಲ್ಲಿ ಬಿದ್ದಿತ್ತು. ಅದನ್ನು ಕಂಡ ಅಕ್ಕಪಕ್ಕದ ಮನೆಯವರು ತಿಮ್ಮಯ್ಯಗೆ ಮಾಹಿತಿ ನೀಡಿದ್ದರು. ನಂತರ ಠಾಣೆಗೆ ತೆರಳಿದ ಆತ ಸರ ಅಪಹರಣಕ್ಕಾಗಿ ದುಷ್ಕರ್ಮಿಗಳು ನನ್ನ ಪತ್ನಿಯನ್ನು ಹತ್ಯೆ ಮಾಡಿದ್ದಾರೆ. ಮಾಂಗಲ್ಯ ಸರ, ಬಳೆ ಕಳವು ಮಾಡಿದ್ದಾರೆ ಎಂದು ದೂರು ನೀಡಿದ್ದ. ತನಿಖೆ ವೇಳೆ ಲಭ್ಯವಾದ ಸಾಕ್ಷ್ಯಾಧಾರದ ಮೇಲೆ ತಿಮ್ಮಯ್ಯನನ್ನು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅವರು ತಿಳಿಸಿದರು.