ಕೆಹೆಚ್‌ಬಿ ಅವ್ಯವಹಾರ; ಜೆಡಿಎಸ್ ಶಾಸಕ ವಿರುದ್ಧ ಲೋಕಾ ಪೊಲೀಸ್ ದೋಷಾರೋಪ
ಕರ್ನಾಟಕ ಗೃಹ ಮಂಡಳಿಯಲ್ಲಿ ನಡೆದಿರುವ ಭೂ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಜೆಡಿಎಸ್ ಶಾಸಕ...
ಮೈಸೂರು: ಕರ್ನಾಟಕ ಗೃಹ ಮಂಡಳಿಯಲ್ಲಿ ನಡೆದಿರುವ ಭೂ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಅವರ ಪುತ್ರ ಜಿ.ಟಿ ಹರೀಶ್ ಸೇರಿದಂತೆ 46 ಮಂದಿ ವಿರುದ್ಧ ದೋಷಾರೋಪ ಮಾಡಿದ್ದಾರೆ.
ಈ ವ್ಯಕ್ತಿಗಳು ಮೈಸೂರು ತಾಲೂಕಿನ ಯೆಲ್‌ವಾಲ್ ಹೋಬಳಿಯಲ್ಲಿ ರೈತರ ಭೂಮಿ ಕಬಳಿಸಿ ಸುಮಾರು 35 ಕೋಟಿ ರು. ಅವ್ಯವಹಾರ ಮಾಡಿದ್ದಾರೆ. ಪ್ರಸ್ತುತ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಮೈಸೂರು ವಿಭಾಗದ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಂ ಜಗದೀಶ್ ಪ್ರಸಾದ್ , ಉಪಲೋಕಾಯುಕ್ತ ಸುಭಾಷ್ ಬಿ ಆದಿ ಅವರಿಗೆ ಗುರುವಾರ ವರದಿ ಸಲ್ಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡ, ಇದು ಸತ್ಯಕ್ಕೆ ದೂರವಾದ ವರದಿ. ನನ್ನ ಹಾಗೂ ನನ್ನ ಕುಟುಂಬದ ರಾಜಕೀಯ ಭವಿಷ್ಯಕ್ಕೆ ಮಸಿ ಬಳಿಯಲು ಮಾಡಿರುವ ಹುನ್ನಾರ ಎಂದು ಹೇಳಿದ್ದಾರೆ.
2007 ಮತ್ತು 2010ರಲ್ಲಿ ದೇವೇಗೌಡ ಕರ್ನಾಟಕ ಗೃಹ ಮಂಡಳಿ ಚೇರ್‌ಮೆನ್ ಆಗಿದ್ದಾಗ ಗುಂಗ್ರಾಲ್ ಛತ್ರ, ಕಲ್ಲೂರ್ ನಾಗನ ಹಳ್ಳಿ ಕಾವಲ್ ಮತ್ತು ಯೆಲಚನ ಹಳ್ಳಿ ಗ್ರಾಮಗಳಲ್ಲಿ 106 ರೈತರಿಂದ 450 ಎಕರೆ ಭೂಮಿಯನ್ನು ಕಬಳಿಸಿತ್ತು. ಆ ವೇಳೆ ಬಿಜೆಪಿ ಅಧಿಕಾರದಲ್ಲಿತ್ತು.
ಈ ಅವ್ಯವಹಾರದ ಬಗ್ಗೆ ಪ್ರಸ್ತುತ ವರ್ಷ ರೈತರು ದೂರು ನೀಡಿದ್ದು, ಅಗಸ್ಟ್ 6 ರಂದು ಇಂಡಿಯನ್ ಎಕ್ಸ್‌ಪ್ರೆಸ್ ಈ ಅವ್ಯವಹಾರದ ಕುರಿತಾದ ವರದಿಯನ್ನು ಪ್ರಕಟಿಸಿತ್ತು.
ಏಜೆಂಟ್ ಗಳು ರೈತರ ಹೆಸರಲ್ಲಿ ಬ್ಯಾಂಕ್ ಖಾತೆ ಆರಂಭಿಸಿದ್ದು ಅದರಲ್ಲಿ ಅವರಿಗೆ ಪರಿಹಾರ ಧನದ ಚೆಕ್‌ಗಳನ್ನು ಜಮಾ ಮಾಡಲಾಗಿತ್ತು. ಇದರಲ್ಲಿ ಮಧ್ಯವರ್ತಿಯಾಗಿರುವ ವ್ಯಕ್ತಿ ಸೆಲ್ಫ್ ಚೆಕ್‌ನಲ್ಲಿ ಅವಿದ್ಯಾವಂತ ರೈತರ ಸಹಿ ಪಡೆದು, ಪರಿಹಾರಧನದಲ್ಲಿ ಒಂದಿಷ್ಟು ರೈತರಿಗೆ ಕೊಟ್ಟು ಬಾಕಿ ಉಳಿದುದನ್ನು ಗುಳುಂ ಮಾಡಿದ್ದಾನೆ.
2009 ಸೆಪ್ಟೆಂಬರ್ 14ರಂದು ರು.1.09 ಕೋಟಿ ಖಾತೆಯಿಂದ ವಿತ್‌ಡ್ರಾ ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಆದಾಗ್ಯೂ , ಅವಿದ್ಯಾವಂತ ರೈತರು ಒಂದು ದಿನಗಲ್ಲಿ ಕೋಟಿಗಟ್ಟಲೆ ದುಡ್ಡನ್ನು ವಿತ್ ಡ್ರಾ ಮಾಡಲು ಹೇಗೆ ಸಾಧ್ಯ ? ಎಂದು ಲೋಕಾಯುಕ್ತ ಮೂಲಗಳು ಪ್ರಶ್ನಿಸಿವೆ.
ತಮಗೆ ಸಿಗಬೇಕಾದ ಹಣದಲ್ಲಿ ನಡೆದ ವಂಚನೆಯ ಬಗ್ಗೆ ರೈತರು ಗೃಹ ಮಂಡಳಿಯ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರ ಲೋಕಾಯುಕ್ತಕ್ಕೆ ಆದೇಶಿಸಿತ್ತು. ಉಪ ಲೋಕಾಯುಕ್ತ ಸುಭಾಶ್ ಬಿ ಆದಿ ಅವರು ಪ್ರಕರಣವನ್ನು ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ವಹಿಸಿದ್ದರು.
-ಯತಿರಾಜು