ಇರುವ ನಾಲ್ಕಕ್ಕೆ ಇಪ್ಪತ್ತೆರಡು ಕನಸು
ರಾಜ್ಯ ಸಂಪುಟದಲ್ಲಿ ಖಾಲಿ ಇರುವ 4 ಸ್ಥಾನಗಳಿಗೆ 22ಕ್ಕೂ ಹೆಚ್ಚು ಆಕಾಂಕ್ಷಿಗಳು...
ಕನ್ನಡಪ್ರಭವಾರ್ತೆ, ಬೆಂಗಳೂರು, ಸೆ.1
ರಾಜ್ಯ ಸಂಪುಟದಲ್ಲಿ ಖಾಲಿ ಇರುವ 4 ಸ್ಥಾನಗಳಿಗೆ 22ಕ್ಕೂ ಹೆಚ್ಚು ಆಕಾಂಕ್ಷಿಗಳು ಹುಟ್ಟಿಕೊಂಡಿದ್ದು, ಶಾಸಕರ ಆಕ್ರೋಶ ಶಮನ ಮಾಡಲು ಸಂಪುಟದಲ್ಲಿ ಕಿರು ಬದಲಾವಣೆಯ ಅನಿವಾರ್ಯ ಕಾಂಗ್ರೆಸ್ ಹೈಕಮಾಂಡ್‌ಗೆ ಎದುರಾಗಿದೆ.
ಎರಡು ವರ್ಷ ಪೂರ್ಣಗೊಳ್ಳುವವರೆಗೆ ಸಂಪುಟ ಪುನಾರಚನೆ ಬಿಲ್‌ಕುಲ್ ಬೇಡ ಎಂಬುದು ಸಿಎಂ ಸಿದ್ದರಾಮಯ್ಯ ಅಭಿಮತ. ಆದರೆ ಜಿಲ್ಲಾವಾರು, ಜಾತಿವಾರು ಹಾಗೂ ಹಿರಿತನಕ್ಕೆ ಪ್ರಾತಿ ನಿಧ್ಯವಿಲ್ಲದ ಈಗಿನ ಸಂಪುಟವನ್ನು ಪುನಾರಚಿಸಲೇಬೇಕೆಂಬುದು ಕಾಂಗ್ರೆಸ್‌ನ ಹಿರಿಯ ಶಾಸಕರ ಹಠ. ಜತೆಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ ಪರಮೇಶ್ವರ ಅವರ ಹುದ್ದೆ ನಿರ್ಧಾರದ ರಹಸ್ಯವೂ ಇಲ್ಲಿ ಸೇರಿಕೊಂಡಿದ್ದು, ಮುಂದಿನ ಎರಡು ದಿನದಲ್ಲಿ ಕಾಂಗ್ರೆಸ್ ವಿದ್ಯಮಾನ ದೆಹಲಿಗೆ ಸ್ಥಳಾಂತರಗೊಳ್ಳಲಿದೆ.
ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಸೆ.3ರಂದು ಅವರಿಬ್ಬರೂ ದೆಹಲಿಗೆ ತೆರಳಲಿದ್ದಾರೆ. ಇದಕ್ಕೂ ಮುನ್ನವೇ ಸಚಿವ ಸ್ಥಾನಾಕಾಂಕ್ಷಿಗಳು ದೆಹಲಿಗೆ ತೆರಳಿ ಲಾಬಿ ಆರಂಭಿಸಿದ್ದಾರೆ. ಕುತೂಹಲಕಾರಿ ಸಂಗತಿ ಎಂದರೆ ಸಂಪುಟ ವಿಸ್ತರಣೆ ಸುದ್ದಿ ಅಮೆರಿಕಾಗೂ ಪಸರಿಸಿದೆ. ಸಿದ್ದರಾಮಯ್ಯ ಹಾಗೂ ಪರಮೇಶ್ವರ ಅವರಿಗೆ ಹೈಕಮಾಂಡ್ ಕರೆ ನೀಡಿದೆ ಎಂಬ ವಾರ್ತೆ ಗೊತ್ತಾಗುತ್ತಿದ್ದಂತೆ ಅಕ್ಕ ಸಮ್ಮೇಳನ ವೀಕ್ಷಣೆಯೂ ಸೇರಿದಂತೆ ಅಮೆರಿಕಾ ಪ್ರವಾಸಕ್ಕೆ ತೆರಳಿದ್ದ ಕಾಂಗ್ರೆಸ್ ಶಾಸಕರು ಪ್ರಯಾಣವನ್ನು ಅರ್ಧಕ್ಕೇ ಮೊಟಕುಗೊಳಿಸಿ ದೆಹಲಿಗೆ ವಾಪಸ್ ಆಗಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್‌ನ ಉನ್ನತ ಮೂಲಗಳ ಪ್ರಕಾರ ಈ ಎಲ್ಲ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿರುವ ವರಿಷ್ಠರು ಸಂಪುಟದಲ್ಲಿ ಕಿರು ಬದಲಾವಣೆ ಮಾಡುವಂತೆ ಸೂಚನೆ ನೀಡಲು ನಿರ್ಧರಿಸಿದ್ದಾರೆ.ಬುಧವಾರ ಸ್ಪಷ್ಟ ಚಿತ್ರಣ ಲಭಿಸಲಿದೆ. ಈ ಹಿನ್ನೆಲೆಯಲ್ಲಿ ರಾಯರೆಡ್ಡಿ, ಆರ್.ವಿ ದೇವರಾಜ್, ರಾಜಶೇಖರ್ ಹುಮ್ನಾಬಾದ್, ಶಿವಮೂರ್ತಿ, ವೀರಣ್ಣ ಮತ್ತೀಕಟ್ಟಿ, ಕೆ.ಬಿ.ಕೋಳಿವಾಡ, ಮಾಲೀಕಯ್ಯ ಗುತ್ತೇದಾರ್ ಸೇರಿದಂತೆ ಹಲವರು ದೆಹಲಿಗೆ ತೆರಳಿದ್ದು, ವರಿಷ್ಠರನ್ನು ಭೇಟಿ ಮಾಡಿ ಸಂಪುಟ ಪುನಾರಚನೆ ಬೇಡಿಕೆ ಸಲ್ಲಿಸಲಿದ್ದಾರೆ.
ನಿಗಮ ಮಂಡಳಿ ನೇಮಕ:
ಇದೆಲ್ಲದರ ಜತೆಗೆ ನಿಗಮ-ಮಂಡಳಿ ವಿಸ್ತರಣೆಯೂ ಭಾರಿ ತಲೆನೋವಾಗಿ ಪರಿಣಮಿಸಿದೆ. ಇದುವರೆಗೆ ಶಾಸಕರನ್ನು ಸಮಾಧಾನ ಮಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಶಾಸಕರ ಮನವೊಲಿಸುವ ಅನಿವಾರ್ಯವೂ ಸೃಷ್ಟಿಯಾಗಿದೆ. ಸೋತವರಿಗೆ, ಮಾಜಿ ಶಾಸಕರಿಗೆ ನಿಗಮ-ಮಂಡಳಿ ನೇಮಕ ಸಂದರ್ಭದಲ್ಲಿ ಅವಕಾಶ ನೀಡಬಾರದು ಎಂಬ ಎಐಸಿಸಿ ಮಾರ್ಗಸೂಚಿಯೇ ಈ ಕಗ್ಗಂಟು ನಿರ್ಮಾಣಕ್ಕೆ ಕಾರಣವಾಗಿದೆ.
ಶಾಸಕರು ಮತ್ತು ಕಾರ್ಯಕರ್ತರಿಗೆ ಈ ಅಧಿಕಾರವನ್ನು 70:30 ಅನುಪಾತದಲ್ಲಿ ಹಂಚುವಂತೆ ದಿಗ್ವಿಜಯ್ ಸಿಂಗ್ ಅವರು ಸೂಚಿಸಿರುವುದರಿಂದ ಈ ಪ್ರಕ್ರಿಯೆಯನ್ನು ನಾಜೂಕಿನಿಂ ನಿಭಾಯಿಸುವ ಸ್ಥಿತಿ ನಿರ್ಮಾಣವಾಗಿದೆ.