ಬಗೆಹರಿಯದ ಪಾಲಿಕೆ ಸೌಧ ವಿವಾದ
ನಾಗರಬಾವಿ ವಾರ್ಡ್ನ ಪಾಲಿಕೆ ಸೌಧ ಮತ್ತು ಚಂದ್ರಗಿರಿ ಪಾರ್ಕ್ ವಿವಾದ ನಿರೀಕ್ಷೆ...
ಬೆಂಗಳೂರು: ನಾಗರಬಾವಿ ವಾರ್ಡ್ನ ಪಾಲಿಕೆ ಸೌಧ ಮತ್ತು ಚಂದ್ರಗಿರಿ ಪಾರ್ಕ್ ವಿವಾದ ನಿರೀಕ್ಷೆಯಂತೆ ಇನ್ನಷ್ಟು ತೀವ್ರವಾಗಿದೆ.
ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಮೇಯರ್ ಕಟ್ಟೆ ಸತ್ಯನಾರಾಯಣ ನಡೆಸಿದ ಸಭೆಯಲ್ಲಿ ಪಾರ್ಕ್ ಉದ್ಘಾಟನೆಯಾಗಿ ಎಂದು ಘೋಷಿಸಲಾಗಿದೆ. ಆದರೆ ಪಾಲಿಕೆ ಸೌಧಕ್ಕೆ ಮಾತ್ರ ಆ ಭಾಗ್ಯ ಸಿಗಲಿಲ್ಲ. ಪಾಲಿಕೆ ಸೌಧವನ್ನು ಮುಂದೊಂದು ದಿನ ಉದ್ಘಾಟಿಸಲು ತೀರ್ಮಾನಿಸಲಾಯಿತು.
ಏಕೆಂದರೆ, ಮೇಯರ್ ಕರೆದಿದ್ದ ಸಭೆಗೆ ಶಾಸಕ ಪ್ರಿಯಾಕೃಷ್ಣ ಮತ್ತು ಬೆಂಬಲಿಗರು ಹಾಜರಾಗಿದ್ದರೆ, ಸ್ಥಳೀಯ ಕಾರ್ಪೋರೇಟರ್ ಉಮೇಶ್ ಶೆಟ್ಟಿ ಮತ್ತು ಬಿಜಪಿ ಸದಸ್ಯರು ಆಗಮಿಸಿರಲಿಲ್ಲ. ಇಧರಿದಂ ಶಾಸಕರ ಸಹಮತದ ಮೇರೆಗೆ ಪಾರ್ಕ್ ಉದ್ಘಾಟನೆಯಾಗಿದೆ ಎಂದು ಘೋಷಿಸಲಾಯಿತು. ಶಾಸಕರು ಒಪ್ಪದ ಕಾರಣಕ್ಕೆ ಪಾಲಿಕೆ ಸೌಧ ಉದ್ಘಾಟನೆ ಬಾಕಿ ಉಳಿಸಲು ನಿರ್ಧರಿಸಲಾಯಿತು.
ಆಧರೆ, ಇದನ್ನು ಬಿಜೆಪಿ ಕಾರ್ಪೋರೇಟರ್ ಉಮೇಶ್ ಶೆಟ್ಟಿ ವಿರೋದಿಸಿದರು. ಸಭೆ ನಂತರ ಮೇಯರ್ ಭೇಟಿ ಮಾಡಿದ ಉಮೇಶ್ ಶೆಟ್ಟಿ, ಈಗ ಪಾರ್ಕ್ ಮಾತ್ರವಲ್ಲ. ಪಾಲಿಕೆ ಸೌಧ ಕೂಡ ಉದ್ಘಾಟನೆಯಾಗಿದೆ. ಇದನ್ನು ಎಲ್ಲರೂ ಒಪ್ಪಿದ್ದಾರೆ ಎಂದರು. ಶಾಸಕರು ಒಪ್ಪಿಗೆ ನೀಡುತ್ತಿಲ್ಲ ಎಂದು ಮತ್ತೆ ಉದ್ಘಾಟನೆ ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ. ಏಕೆಂದರೆ, ಭಾನುವಾರ ನಡೆಸಿದ ಕಾರ್ಯಕ್ರಮದ ಸಿದ್ಧತೆಗೆ ರು.8 ಲಕ್ಷ ವೆಚ್ಚವಾಗಿತ್ತು. ಈಗ ಮತ್ತೆ ಪಾಲಿಕೆ ಸೌಧ ಉದ್ಘಾಟಿಸಲು ರು.5 ಲಕ್ಷ ವೆಚ್ಚ ಮಾಡಿದರೆ ಅದು ಅನಗತ್ತಯ ವೆಚ್ಚವಾಗುತ್ತದೆ. ಆದ್ದರಿಂದ ಮುಂದಿನ ವಾರದಿಂದಲೇ ಪಾಲಿಕೆ ಸೌಧದಲ್ಲಿ ವಾರ್ಡ್ ಕಚೇರಿ ಆರಂಭಿಸುತ್ತೇನೆ. ಅದೇ ರೀತಿ ಪಾಲಿಕೆ ಉಪ ವಿಭಾಗದ ಕಚೇರಿಗಳೂ ಕಾರ್ಯಾರಂಭ ಮಾಡಲಿವೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ಪ್ರಿಯಾಕೃಷ್ಣ, ಪಾರ್ಕ್ ಉದ್ಘಾಟನೆ ಕಾರ್ಯಕ್ರಮಕ್ಕೆ ನಾನೇನೂ ಅಡ್ಡಿ ಮಾಡಿರಲಿಲ್ಲ. ಗಲಾಟೆ ನಡೆಯಬಹುದೆಂದು ಪೊಲೀಸರು ನಿಷೇದಾಜ್ಞೆ ಜಾರಿಗೊಳಿಸಿದ್ದರು. ಅಲ್ಲದೆ, ಪಾಲಿಕೆ ಸೌಧದ ಕಾಮಗಾರಿ ಇನ್ನೂ ಮುಗಿದಿಲ್ಲ. ಆದರೂ ಉದ್ಘಾಟನೆಗೆ ಮುಂದಾಗಿರುವುದು ಸರಿಯಲ್ಲ. ಆದ್ದರಿಂದ ಸದ್ಯದಲ್ಲೇ ದಿನಾಂಕ ನಿಗದಿ ಮಾಡಿ ಉದ್ಘಾಟನೆಗೆ ಕ್ರಮಕೈಗೊಳ್ಳಲಾಗುವುದು ಎಂದರು.
ಮೇಯರ್ ಕಟ್ಟೆ ಸತ್ಯನಾರಾಯಣ ಮಾತನಾಡಿ, ಪಾರ್ಕ್ ಉದ್ಘಾಟನೆಯಾಗಿದೆ ಎಂದು ಘೋಷಿಸಲಾಗಿದ್ದು, ಅದನ್ನು ಸಾರ್ವಜನಿಕರ ಬಳಕೆಗೂ ಮುಕ್ತಗೊಳಿಸಲಾಗಿದೆ. ಆದರೆ ಪಾಲಿಕೆ ಸೌಧ ಉದ್ಘಾಟನೆ ಬಾಕಿ ಇದೆ ಎಂದು ಪ್ರಿತಿಕ್ರಿಯಿಸಿದರು.