ರಾಜ್ಯರೈತರಿಗೆ ಸೌರಮಾನ ಹಬ್ಬ
ರೈತರು ಇನ್ನು ಸೌರ ವಿದ್ಯುತ್ ಉತ್ಪಾದಿಸಿ ತಮಗೆ ಬೇಕಾದಷ್ಟು ಬಳಿಸಿಕೊಂಡು ಉಳಿದದ್ದನ್ನು...
ಕನ್ನಡಪ್ರಭವಾರ್ತೆ, ಬೆಂಗಳೂರು, ಸೆ.1:
ರೈತರು ಇನ್ನು ಸೌರ ವಿದ್ಯುತ್ ಉತ್ಪಾದಿಸಿ ತಮಗೆ ಬೇಕಾದಷ್ಟು ಬಳಿಸಿಕೊಂಡು ಉಳಿದದ್ದನ್ನು ಸರ್ಕಾರಕ್ಕೆ ಮಾರಾಟ ಮಾಡಬಹುದು. ಈ ಮೂಲಕ 'ಸೂರ್ಯ ರೈತ'ರಾಗಬಹುದು. ದೇಶದಲ್ಲೇ ಪ್ರಥಮ ಎನ್ನಲಾದ ಈ ಯೋಜನೆಯನ್ನು ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಸೌರವಿದ್ಯುತ್ ಉತ್ಪಾದಿಸಿ ತನ್ನ ಪಂಪ್‌ಸೆಟ್‌ಗೆ ಬಳಿಸಿಕೊಳ್ಳುವ ರೈತ, ಉಪಯೋಗಿಸದ ಸಂದಂರ್ಭದಲ್ಲಿ ಅದನ್ನು ಮಾರಬಹುದು. ಪಂಪ್ ಸೆಟ್ ಬಳಿಯೇ ಇರುವ ಕಂಬದ ಮೂಲಕ ವಿದ್ಯುತ್ ಹರಿಸಬಹುದು.
ಇದಕ್ಕೆ ಮೀಟರ್ ಅಳವಡಿಸಿಕೊಳ್ಳುವ ಮೂಲಕ ಪ್ರತಿ ಯೂನಿಟ್ ವಿದ್ಯುತ್‌ಗೆ ರು.9.56 ದರವನ್ನೂ ಪಡೆಯಬಹುದು. ಆರು ತಿಂಗಳಿಗೊಮ್ಮೆ ರೈತರ ಖಾತೆಗೆ ನೇರವಾಗಿ ಹಣ ಸಂದಾಯವಾಗುತ್ತದೆ. ಸಬ್ಸಿಡಿ ಪಡೆದು ಸೌರವಿದ್ಯುತ್ ಅಳವಡಿಸಿಕೊಂಡರೆ ಈ ದರ ರು.7.20 ಆಗಲಿದೆ.
ಸೋಮವಾರ ಈ ವಿಷಯ ತಿಳಿಸಿದ ಇಂಧನ ಸಚಿವ ಡಿ.ಕೆ ಶಿವಕುಮಾರ್, ಸೌರ ವಿದ್ಯುತ್ ಬಗ್ಗೆ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸಿದ್ದು, ಸೌರ ಪಂಪ್ ಸೆಟ್‌ಗೆ ಆದ್ಯತೆ ನೀಡುತ್ತಿದೆ ಎಂದರು.
ಅವರು ಹೇಳಿದ್ದಿಷ್ಟು: ಸರ್ಕಾರದಿಂದ ಸಬ್ಸಿಡಿ ಪಡೆಯುವ ರೈತರೂ ವಿದ್ಯುತ್ ಮಾರಬಹುದು. ಈ ವರ್ಷ ಸುಮಾರು 3500 ರೈತರಿಗೆ ಸೌರ ಪಂಪ್‌ಸೆಟ್ ಅಳವಡಿಸುವ ಗುರಿ ಹೊಂದಲಾಗಿದೆ. ಅಲ್ಲದೆ, ಸಬ್ಸಿಡಿ ಇಲ್ಲದೇ ಸೌರ ಪಂಪ್‌ಸೆಟ್ ಅಳವಡಿಸಿಕೊಳ್ಳವವರಿಗೆ ಬ್ಯಾಂಕ್‌ನಿಂದ ಕಡಿಮೆ ದರದಲ್ಲಿ ಸಾಲ ಒದಗಿಸಿಕೊಡಲಾಗುತ್ತದೆ.
ರೈತರು ತಮ್ಮ ಜಮೀನಿನಲ್ಲಿ 10.ಕಿ.ವ್ಯಾ.ಸೌರ ವಿದ್ಯುತ್ ಉತ್ಪಾದಿಸಿದರೆ, ಪಂಪ್‌ಸೆಟ್‌ಗಳಿಗೆ ವಿದ್ಯುತ್ ಒದಗಿಸಿಕೊಳ್ಳುವ ಜತೆಗೆ ವಾರ್ಷಿಕವಾಗಿ ರು.50 ಸಾವಿರ ಗಳಿಸಬಹುದು. ವರ್ಷದ 365 ದಿನದಲ್ಲಿ 200 ದಿನ ಸೌರ ವಿದ್ಯುತ್ ಅನ್ನು ರೈತರು ತಮ್ಮ ನೀರಾವರಿಗೆ ಬಳಸುತ್ತಾರೆ. ಸುಮಾರು 40-45 ದಿನ ಮೋಡ, ಮಳೆ ಎಂದಾದರೂ ಸುಮಾರು 120 ದಿನ ಉಳಿಯುತ್ತದೆ. ಈ ದಿನಗಳ ಸೌರ ವಿದ್ಯುತ್ ಅನ್ನು ಮಾರಾಟ ಮಾಡಬಹುದಾಗಿದೆ. ಅಷ್ಟೇ ಅಲ್ಲ, ದಿನದ 12 ಗಂಟೆಯೂ ಪಂಪ್‌ಸೆಟ್ ಚಾಲನೆಯಲ್ಲಿ ಇರಬೇಕಾದ ಅಗತ್ಯ ಇರುವುದಿಲ್ಲ. ಈ ಸಮಯದಲ್ಲೂ ವಿದ್ಯುತ್ ಮಾರಬಹುದು.
ಸರ್ಕಾರ ಈಗಾಗಲೇ ಸೌರ ನೀತಿ ಜಾರಿಗೆ ತಂದಿದೆ. ಇದಕ್ಕೆ ಕೇಂದ್ರ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿದೆ ಎಂದರು.