ಡಿವಿಎಸ್ ಪುತ್ರ ಕಾರ್ತಿಕ್ ಗೌಡ ಬಂಧನ ಸಾಧ್ಯತೆ
ನಟಿ ಮೈತ್ರಿಯಾ ಗೌಡಗೆ ವಂಚನೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕಾರ್ತಿಕ್ ಗೌಡ...
ಬೆಂಗಳೂರು: ನಟಿ ಮೈತ್ರಿಯಾ ಗೌಡಗೆ ವಂಚನೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕಾರ್ತಿಕ್ ಗೌಡ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಕೇಂದ್ರ ಸಚಿವ ಡಿ.ವಿ ಸದಾನಂದಾಗೌಡ ಪುತ್ರ ಕಾರ್ತಿಕ್ ಗೌಡ ವಿರುದ್ಧ ನಟಿ ಮೈತ್ರಿಯಾ ಗೌಡ ಅತ್ಯಾಚಾರ, ಅಪಹರಣ ಹಾಗೂ ವಂಚನೆ ಆರೋಪದಡಿ ಆರ್‌ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಆರ್.ಟಿ ನಗರ ಪೊಲೀಸರು ತನಿಖೆ ಕೈಗೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್‌ಗೌಡಗೆ ಸೆಪ್ಟೆಂಬರ್ 1ರಂದು ನೋಟೀಸ್ ನೀಡಿದ್ದರು. ಸೆಪ್ಟೆಂಬರ್ 3ರೊಳಗೆ ವಿಚಾರಣೆಗೆ ಹಾಜರಾಗಬೇಕು ಎಂದು ತಿಳಿಸಿದ್ದರು. ಆದರೆ ಕಾರ್ತಿಕ್‌ಗೌಡ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಕಡಿಮೆ ಇದ್ದು, ಇಂದು ಸಂಜೆಯೊಳಗೆ ಕಾರ್ತಿಕ್ ವಿಚಾರಣೆಗೆ ಹಾಜರಾಗದಿದ್ದರೆ, ನಾಳೆ ಪೊಲೀಸರು ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಐಪಿಸಿ ಸೆಕ್ಷನ್ 420 ಮತ್ತು 376ರ ಅಡಿಯಲ್ಲಿ ಕಾರ್ತಿಕ್ ವಿರುದ್ಧ ಕೇಸ್ ದಾಖಲಾಗಿದೆ.
ಕಳೆದ ಬುಧವಾರ ಮೈತ್ರಿಯಾ, ಒಂದು ವರ್ಷಕ್ಕೂ ಹೆಚ್ಚು ದಿನಗಳಿಂದ ಪರಿಚಯವಿದ್ದ ಕಾರ್ತಿಕ್, ಮದುವೆಯಾಗುವುದಾಗಿ ದೈಹಿಕ ಸಂಬಂಧ ಬೆಳೆಸಿದ್ದ, ಮಂಗಳೂರಿನಲ್ಲಿರುವ ಸದಾನಂದಗೌಡರ ಮನೆಯಲ್ಲಿ ಜೂ.5 ಮದುವೆಯಾಗಿದ್ದ ಎಂದು ದೂರಿನಲ್ಲಿ ಮೈತ್ರಿಯಾ ವಿವರಿಸಿದ್ದರು.
ದೂರಿನ ಮೇರೆಗೆ ಅಂಬೇಡ್ಕರ್ ಕಾಲೇಜಿನಲ್ಲಿ ಮೈತ್ರಿಯಾ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು.