ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಮದುವೆ ಹೆಸರಲ್ಲಿ ಮಾರಿಯೇ ಬಿಟ್ಟಳು!

ರಾಜ್ಯಾದ್ಯಂತ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಈಗೀಗ ಹೆಚ್ಚು ಬೆಳಕಿಗೆ...

Mainashree
Updated On : 3 Sept 2014, 10:24 am

ಬೆಳಗಾವಿ: ರಾಜ್ಯಾದ್ಯಂತ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಈಗೀಗ ಹೆಚ್ಚು ಬೆಳಕಿಗೆ ಬರುತ್ತಿದೆ. ಆದರೆ ಇನ್ನೊಂದು ಆತಂಕಕಾರಿ ಸಂಗತಿಯೆಂದರೆ ಬಡ ಹೆಣ್ಣು ಮಕ್ಕಳ, ಮಹಿಳೆಯರ, ಮುಗ್ಧ ಬಾಲಕಿಯರ ಮಾರಾಟ ಮಾಡುತ್ತಿರುವ ಭಯಾನಕ ಅಂಶ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಉದ್ಯೋಗ ಕೊಡಿಸುವ, ಮದುವೆ ಮಾಡಿಸುವ ನೆಪದಲ್ಲಿ ಯುವತಿಯರನ್ನು ಯಾಮಾರಿಸಿ ವೇಶ್ಯಾವಾಟಿಕೆಗೆ ದೂಡುತ್ತಿರುವ ವ್ಯವಸ್ಥಿತ ಜಾಲವೊಂದು ಕಾರ್ಯನಿರ್ವಹಿಸುತ್ತಿದೆ. ಬೆಳಗಾವಿಯ 15 ವರ್ಷದ ಬಾಲಕಿಯನ್ನು ವಿವಾಹ ನೆಪದಲ್ಲಿ ನಂಬಿಸಿ 2.20 ಲಕ್ಷ ರು.ಗೆ ರಾಜಸ್ಥಾನ ಮೂಲದ ಕುಟುಂಬವೊಂದಕ್ಕೆ ಮಾರಾಟ ಮಾಡಿದ್ದು, ಇದೀಗ ಆ ಮಹಿಳೆ ಇಲ್ಲಿನ ಮಾರ್ಕೆಟ್ ಪೊಲೀಸರಿಂದ ಮಂಗಳವಾರ ಬಂಧಿತಳಾಗಿದ್ದಾಳೆ.

ಬಾಲಿಕಿಯನ್ನು ಮಾರಾಟ ಮಾಡಿದ ನಗರದ ಪಾಟೀಲ ಗಲ್ಲಿಯ ನಿವಾಸಿ ರುದ್ರಾಕ್ಷಿ ಅಲಿಯಾಸ ರಾಧಾ ರೇವಣಕರ ಬಂಧಿತ ಆರೋಪಿ. ರಾಜಸ್ಥಾನ ಮೂಲದ ಕೈಲಾಸ ಜೈನ ಎಂಬಾತನ ಜತೆ ಸೇರಿ ಶಹಾಪುರದ ಬಾಲಕಿಯನ್ನು ರಾಜಸ್ಥಾನದ ಮುಖೇಶ ಜೈನ್‌ಗೆ ಮಾರಿದ್ದಾಳೆ ಎಂದು ಬಾಲಕಿ ತಾಯಿ ಕಾಳವ್ವ ಆ.31 ರಂದು ಮಾರ್ಕೆಟ್ ಠಾಣೆಯಲ್ಲಿ ದೂರು ನೀಡಿದ್ದಳು.

ಘಟನೆ ವಿವರ: ಕೂಲಿ ಕೆಲಸ ಮಾಡಿಕೊಂಡಿದ್ದ ಕಾಳವ್ವಳಿಗೆ ಕೆಲವು ದಿನಗಳ ಹಿಂದೆ ರುದ್ರಾಕ್ಷಿ ಅಲಿಯಾಸ ರಾಧಾ ಪರಿಚಯವಾಗಿದೆ. ಆಗ ರಾಧಾ ಕಾಳವ್ವನ ಮಗಳಿಗೆ ಅಡುಗೆ ಕೆಲಸ ಕಲಿಸುವುದಾಗಿ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದಾಳೆ. ಸ್ವಲ್ಪ ದಿನದ ಬಳಿಕ ನಿಮ್ಮ ಮಗಳಿಗೆ ಒಳ್ಳೆಯ ಉದ್ಯೋಗವಿರುವ ವರ ನೋಡಿದ್ದು, ಆತನೊಂದಿಗೆ ವಿವಾಹ ಮಾಡುತ್ತೇನೆ. ಎಂದು ನಂಬಿಸಿ ಇವರನ್ನು ರಾಜಸ್ಥಾನದ ಬಾಡ್ಮೀರ ಗ್ರಾಮಕ್ಕೆ ಕರೆ ತಂದಿದ್ದಾರೆ. ಅಲ್ಲಿ ಮನೆಯೊಂದರಲ್ಲಿ ಕಾಳವ್ವನನ್ನು ತನ್ನ ಮನೆಯ ರೂಪ್‌ನಲ್ಲಿ ಕೂಡಿಹಾಕಿ. ಬಾಲಕಿಯನ್ನು ಕೈಲಾಸ್‌ಗೆ ಒಪ್ಪಿಸಿ ಹಣ ಪಡೆದಿದ್ದಾಳೆ. ಬಳಿಕ ಕಾಳವ್ವಳಿಗೆ ಅಲ್ಲಿನ ಭಾಷೆ ಬರದ ಕಾರಣ ಸುಳ್ಳು ಹೇಳಿ ವಾಪಸ್ ಕರೆತಂದಿದ್ದಾಳೆ. 15 ದಿನ ಬಳಿಕ ಬಾಲಕಿಯು ತನ್ನ ತಾಯಿ ಕಾಳವ್ವ ಹಾಗೂ ಚಿಕ್ಕಪ್ಪ ಸಾಗರ್‌ಗೆ ಕರೆ ಮಾಡಿ, ತನ್ನನ್ನು ಹಣಕ್ಕಾಗಿ ಮಾರಾಟ ಮಾಡಿರುವ ವಿಷಯ ತಿಳಿಸಿದ್ದಾಳೆ.

ಆಗ ನಿಜ ಸ್ಥಿತಿ ಅರಿತ ಕಾಳವ್ವ, ಸಾಗರ್ ಜತೆಗೂಡಿ ರಾಜಸ್ಥಾನಕ್ಕೆ ಹೋಗಿ ಮಗಳನ್ನು ಕಳುಹಿಸಿಕೊಡುವಂತೆ ಕೈಲಾಸ್ ಬಳಿ ಕೇಳಿದ್ದು, 2.20 ಲಕ್ಷ ಹಣಕೊಟ್ಟು ಮಗಳನ್ನು ಕರೆದೊಯ್ಯಲು ಹೇಳಿದ್ದಲ್ಲದೆ, ಪೊಲೀಸರಿಗೆ ದೂರು ಕೊಟ್ಟು ಹೆದರಿಸಿದ್ದಾನೆ ಎಂದು ಇದೀಗ ಮಾರ್ಕೆಟ್ ಠಾಣೆಯಲ್ಲಿ ಕಾಳವ್ವ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ರಾಧಾ ರೇವಣಕರ, ಕೈಲಾಸ ಜೈನ್ ಮತ್ತು ಮುಖೇಶ ಜೈನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಾರಂಭವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement