ಸಿದ್ದರಾಮಯ್ಯ ಸರ್ಕಾರ ಪರ ವೈಎಸ್ವಿ ದತ್ತ ಬ್ಯಾಟಿಂಗ್
ರಾಜ್ಯಪಾಲರ ನೇಮಕ ವಿಷಯದಲ್ಲಿ ಕೇಂದ್ರ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ...
ಬೆಂಗಳೂರು: ರಾಜ್ಯಪಾಲರ ನೇಮಕ ವಿಷಯದಲ್ಲಿ ಕೇಂದ್ರ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸೌಜನ್ಯಕ್ಕಾದರೂ ಸಮಾಲೋಚಿಸಬೇಕಿತ್ತು. ಅಲ್ಲದೆ, ಶಿಕ್ಷಕರ ದಿನದಂದು ಮೋದಿ ಭಾಷಣಕ್ಕೆ ಸಜ್ಜಾಗಿ ಎಂದು ಕೇಂದ್ರ ಸರ್ಕಾರ ಶಿಕ್ಷಣ ಅಧಿಕಾರಿಗಳಿಗೇ ನೇರವಾಗಿ ಸೂಚಿಸಿರುವುದು ಸರಿಯಲ್ಲ ಎಂದು ಜೆಡಿಎಸ್ ವಿಧಾನಸಭೆ ಉಪನಾಯಕ ವೈ.ಎಸ್ವಿ ದತ್ತ ಅವರು ಕಾಂಗ್ರೆಸ್ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಕೇಂದ್ರ ಸರ್ಕಾರ ಬದಲಾದಾಗ ರಾಜ್ಯ ಪಾಲರನ್ನು ಬದಲಿಸುವುದು ವಾಡಿಕೆ. ಅದಕ್ಕೆ ರಾಜಕೀಯ ಬಣ್ಣ ಬೇಡ. ಆದರೆ, ರಾಜ್ಯಪಾಲರನ್ನು ನೇಮಿಸುವಾಗ ಮುಖ್ಯಮಂತ್ರಿಯವರೊಂದಿಗೆ ಸಮಾಲೋಚಿಸಬೇಕಿತ್ತು. ಇದು ಕಡ್ಡಾಯ ಅಲ್ಲದಿದ್ದರೂ ಸೌಜನ್ಯ. ಕೇಂದ್ರದ ಮುಂದಿರುವ ಸರ್ಕಾರಿ ಆಯೋಗ ವರದಿಯಲ್ಲಿ ರಾಜ್ಯಪಾಲರ ನೇಮಕದಲ್ಲಿ ರಾಜ್ಯ ಸರ್ಕಾರಗಳ ಸಮ್ಮತಿ ಅಗತ್ಯ ಎಂದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಇಷ್ಟೇ ಅಲ್ಲ ಶಿಕ್ಷಕರ ದಿನವಾದ ಸೆ.5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿ, ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡದೆ ನೇರವಾಗಿ ಅಧಿಕಾರಿಗಳಿಗೆ ಕಾರ್ಯಕ್ರಮಕ್ಕೆ ತಯಾರಾಗಲು ಸೂಚನೆ ನೀಡಲಾಗಿದೆ. ಇದು ಸರಿಯಲ್ಲ ಎಂದು ಆರೋಪಿಸಿದರು.
ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ನಾನು ಕೇಳಿದಾಗ ಅವರೇ ನಮಗೆ ಏನೂ ಮಾಹಿತಿ ಇಲ್ಲ. ಅಧಿಕಾರಿಗಳಿಗೇ ಸೂಚಿಸಿದ್ದಾರೆ. ಹೀಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ವತಿಯಿಂದ ರಾಜ್ಯದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಸರಿಯಲ್ಲ. ಈ ಹಿಂದೆ ರಾಜೀವ್ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಎಲ್ಲೆಡೆ ಕಾರ್ಯಕ್ರಮ ಮಾಡಲು ಮುಂದಾದಾಗ, ಅಂದಿನ ಗುಜರಾತ್ ಸರ್ಕಾರ ಅವಕಾಶ ಮಾಡಿಕೊಟ್ಟಿರಲಿಲ್ಲ ಎಂದು ವೈಎಸ್ವಿ ದತ್ತ ನುಡಿದರು.
ಧರಣಿ ಇಲ್ಲ: ರಸಗೊಬ್ಬರ ಕೊರತೆ ಬಗ್ಗೆ ನಾನು ಸರ್ಕಾರದ ಗಮನ ಸೆಳೆದು, ಪೂರೈಕೆ ಸರಿ ಮಾಡದಿದ್ದರೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಕಚೇರಿ ಮುಂದೆ ಸೆ.2ರಂದು ಧರಣಿ ಮಾಡುತ್ತೇನೆ ಎಂದು ತಿಳಿಸಿದ್ದೆ. ರಾಜ್ಯ ಸರ್ಕಾರ ರಸಗೊಬ್ಬರ ಅದರಲ್ಲೂ ಯೂರಿಯಾ ಪೂರೈಕೆಗೆ ಸೂಕ್ತ ಕ್ರಮ ಕೈಗೊಂಡಿರುವುದರಿಂದ ಧರಣಿ ವಾಪಸ್ ಪಡೆದಿದ್ದೇನೆ ಎಂದು ದತ್ತ ತಿಳಿಸಿದರು.
ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ದೂರ ಉಳಿದು ಪಕ್ಷ ಸಂಘಟನೆ ಮಾಡಲು ಬುಧವಾರ ನಡೆಯುವ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕ್ರಿಯಾಯೋಜನೆ ರೂಪಿಸಿ, ಅಂತಿಮಗೊಳಿಸಲಾಗುವುದು ಎಂದರು. ಅಲ್ಲದೆ, ಯಾವುದೇ ಶಾಸಕರು ಪಕ್ಷ ಬಿಟ್ಟು ಹೊರ ಹೋಗುವುದಿಲ್ಲ ಎಂದು ಪದೇ ಪದೆ ಹೇಳಿದರು.