ಡಿವಿಎಸ್ ಪುತ್ರ ಕಾರ್ತಿಕ್ ವಿರುದ್ಧ ಬಂಧನ ವಾರೆಂಟ್
ನಟಿ ಮೈತ್ರಿಯಾ ಗೌಡಗೆ ವಂಚನೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗದ ಕೇಂದ್ರ ಸಚಿವ ಡಿವಿಎಸ್ ಪುತ್ರ ಕಾತೀಕ್‌ಗೌಡ ವಿರುದ್ಧ ಕೋರ್ಟ್ ಜಾಮೀನು...
ಬೆಂಗಳೂರು: ನಟಿ ಮೈತ್ರಿಯಾ ಗೌಡಗೆ ವಂಚನೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗದ ಕೇಂದ್ರ ಸಚಿವ ಡಿವಿಎಸ್ ಪುತ್ರ ಕಾತೀಕ್‌ಗೌಡ ವಿರುದ್ಧ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಮಾಡಿದ್ದು, ಯಾವ ಕ್ಷಣದಲ್ಲಾದರು ಕಾರ್ತಿಕ್ ಗೌಡರ ಬಂಧನವಾಗಬಹುದು.
ಪ್ರಕರಣದ ತನಿಖೆ ನಡೆಸುತ್ತಿರುವ ಆರ್.ಟಿ ನಗರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್‌ಗೌಡಗೆ ಸೆಪ್ಟೆಂಬರ್ 1ರಂದು ನೋಟೀಸ್ ನೀಡಿ ಸೆ. 3ರೊಳಗೆ ವಿಚಾರಣೆಗೆ ಹಾಜರಾಗಬೇಕು ಎಂದು ತಿಳಿಸಿದ್ದರು. ಆದರೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿರುವ ಕಾರ್ತಿಕ್‌ಗೌಡರನ್ನು ಬಂಧಿಸಲು ವಾರೆಂಟ್ ಜಾರಿ ಮಾಡುವಂತೆ ಪೊಲೀಸರು ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್‌ಗೆ ಮನವಿ ಮಾಡಿದರು. ಪೊಲೀಸರ ಮನವಿ ಆಲಿಸಿದ ಕೋರ್ಟ್ ಕಾರ್ತಿಕ್ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿದೆ.
ಬಂಧನ ವಾರೆಂಟ್ ಪಡೆದಿರುವ ಪೊಲೀಸರು ಯಾವುದೇ ಕ್ಷಣದಲ್ಲಾದರು ಕಾರ್ತಿಕ್‌ನನ್ನು ಬಂಧಿಸುವ ಸಾಧ್ಯತೆ ಇದೆ. ಸದ್ಯ ಕಾರ್ತಿಕ್ ಎಲ್ಲಿ ಇದ್ದಾನೆ ಎಂಬುದು ಯಕ್ಷ ಪ್ರಶ್ನೆಯಾಗಿದ್ದು, ಕಾರ್ತಿಕ್ ಪತ್ತೆಗಾಗಿ ಪೊಲೀಸರು ಶೋಧಕಾರ್ಯ ನಡೆಸಬೇಕಿದೆ.
ಮತ್ತೊಂದೆಡೆ, ನಟಿ ಮೈತ್ರಿಯಾ ಗೌಡಗೆ ವಂಚನೆ ಪ್ರಕರಣ ಸಂಬಂಧ ಕಾರ್ತಿಕ್‌ಗೌಡ ಬೆಂಗಳೂರಿನ ಸೆಷನ್ಸ್ ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು, ಇಂದು ವಿಚಾರಣೆ ನಡೆಯಲಿದೆ. ಹೀಗಾಗಿ ಸೆಷನ್ಸ್ ಕೋರ್ಟ್‌ನ ಆದೇಶದ ಮೇಲೆ ಕಾರ್ತಿಕ್‌ಗೌಡ ಬಂಧನ ನಿರ್ಧಾರವಾಗಲಿದೆ. ಒಂದು ಪಕ್ಷ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಆದೇಶವನ್ನು ಮುಂದೂಡಿದರೆ ಆಗ ಕಾರ್ತಿಕ್‌ಗೌಡನನ್ನು ಬಂಧಿಸಲು ಪೊಲೀಸರಿಗೆ ಅವಕಾಶವಿರುತ್ತದೆ.
ಕೇಂದ್ರ ಸಚಿವ ಡಿ.ವಿ ಸದಾನಂದಾಗೌಡ ಪುತ್ರ ಕಾರ್ತಿಕ್ ಗೌಡ ವಿರುದ್ಧ ನಟಿ ಮೈತ್ರಿಯಾ ಗೌಡ ಅತ್ಯಾಚಾರ, ಅಪಹರಣ ಹಾಗೂ ವಂಚನೆ ಆರೋಪದಡಿ ಆರ್‌ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಾರ್ತಿಕ್ ವಿರುದ್ಧ ಐಪಿಸಿ ಸೆಕ್ಷನ್ 420 ಮತ್ತು 376ರ ಅಡಿಯಲ್ಲಿ ಕೇಸ್ ದಾಖಲಾಗಿದೆ.