ನಿಸರ್ಗ ವಿಕೋಪ ವಾರದಲ್ಲಿ ಕೇಂದ್ರಕ್ಕೆ ವರದಿ: ಸಿಎಂ
ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿ ಸಂತ್ರಸ್ಥರ ನೆರವಿಗೆ ಧಾವಿಸುವಲ್ಲಿ ಸರ್ಕಾರ ವಿಳಂಬ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...
ಗುಲ್ಬರ್ಗ: ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿ ಸಂತ್ರಸ್ಥರ ನೆರವಿಗೆ ಧಾವಿಸುವಲ್ಲಿ ಸರ್ಕಾರ ವಿಳಂಬ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅತಿವೃಷ್ಟಿ ಪೀಡಿತ ಪ್ರದೇಶದಲ್ಲಿ ಕೃಷಿ ಸಚಿವರು, ಕಂದಾಯ ಸಚಿವರು ಸೇರಿದಂತೆ ಅನೇಕ ಸಚಿವರು ಪ್ರವಾಸ ಮಾಡಿದ್ದಾರೆ. ಯಾವ ಸಚಿವರೂ ಸಂಕಷ್ಟದ ಸಂದರ್ಭದಲ್ಲಿ ಸುಮ್ಮನಿಲ್ಲ ಎಂದು ಹೇಳಿದರು.
ಮಳೆ ಹಾನಿಗೊಳಗಾದ ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಶನಿವಾರ ವೈಮಾನಿಕ ಸಮೀಕ್ಷೆ ನಡೆಸಿ ಮಾತನಾಡಿದರು.
ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಹಾನಿ ಕುರಿತು ಕೇಂದ್ರ ಸರ್ಕಾರಕ್ಕೆ ವಾರದೊಳಗೆ ವರದಿ ಸಲ್ಲಿಸುವುದರ ಜತೆಗೆ, ಪರಿಹಾರಕ್ಕಾಗಿ ಹೆಚ್ಚಿನ ನೆರವು ಕೋರಲಾಗುವುದು. ಉತ್ತರ ಕರ್ನಾಟಕ ಭಾಗದ 8 ಜಿಲ್ಲೆಗಳಿಗೆ ಲಭ್ಯವಿರುವ ಅನು ದಾನದಲ್ಲಿ ರು.97 ಕೋಟಿಯನ್ನು ರಾಜ್ಯ ಸರ್ಕಾರದ ಈಗಾಗಲೇ ಬಿಡುಗಡೆ ಮಾಡಿದೆ. ಈ ಭಾಗದಲ್ಲಿ ಅತಿವೃಷ್ಟಿಯಿಂದ ರು.400 ಕೋಟಿ ಹಾನಿ ಅಂದಾಜಿದೆ. ಮಳೆ ಹಾನಿಯ ವರದಿ ವಾರದಲ್ಲಿ ಕೈ ಸೇರಲಿದ್ದು, ಎಲ್ಲ ಕ್ರೋಡಿಕರಿಸಿ ಕೇಂದ್ರಕ್ಕೆ ಸಲ್ಲಿಸಲಾವುದು ಎಂದರು.
ತಕ್ಷಣದ ಪರಿಹಾರ ಕಾರ್ಯಗಳಿಗೆ ಹಣದ ಕೊರತೆಯಿಲ್ಲ. ಅಗತ್ಯದ ಬಗ್ಗೆ ತಿಳಿಸಿದರೆ ವಿಳಂಬ ಮಾಡದೆ ಹಣ ಬಿಡುಗಡೆ ವ್ಯವಸ್ಥೆ ಮಾಡಲಾಗುವುದು. ಪ್ರಕೃತಿ ವಿಕೋಪ ಪರಿಹಾರ ನಿಧಿ(ಸಿಆರ್ಎಫ್) ನಿಯಮಾವಳಿಯಂತೆ ನೀಡುವ ಬೆಳೆ ಹಾನಿ ಪರಿಹಾರದೊಂದಿಗೆ ರಾಜ್ಯದ ಮೊತ್ತ ಸೇರಿಸಿ ಪರಿಹಾರ ನೀಡುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದರು.