ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಸವಾಲಿನ ಹಾದಿಯಲ್ಲಿ ಸವಾರಿ!

ಅತ್ಯಂತ ಕ್ಲಿಷ್ಟಕರವಾದ ಏರು ತಗ್ಗಿನ ಹಾದಿ, ಅಪಾಯಕಾರಿ ಕಲ್ಲು ಬಂಡೆ, ಬೆಟ್ಟ, ಕೆಸರಿನ ದಾರಿಯಲ್ಲಿ ಸಾಲು...

Mainashree
Updated On : 7 Sept 2014, 11:55 am

ಸೋಮವಾರಪೇಟೆ: ಅತ್ಯಂತ ಕ್ಲಿಷ್ಟಕರವಾದ ಏರು ತಗ್ಗಿನ ಹಾದಿ, ಅಪಾಯಕಾರಿ ಕಲ್ಲು ಬಂಡೆ, ಬೆಟ್ಟ, ಕೆಸರಿನ ದಾರಿಯಲ್ಲಿ ಸಾಲು ಸಾಲು ಜೀಪ್‌ಗಳ ವೇಗದ ರೋಮಾಂಚಕ ಸವಾರಿ..!

ಇಲ್ಲಿನ ಪಯೋನಿಯರ್ಸ್ ಟೆನಿಸ್ ಕ್ಲಬ್ ಆಶ್ರಯದಲ್ಲಿ ಶನಿವಾರ 'ಎಸ್ಕೇಪ್ ಟು ನೇಚರ್ ಆಫ್ ರೋಡ್‌' ಜೀಪ್ ರ್ಯಾಲಿ ನಡೆಯಿತು. ಚಾಲಕರು ಸವಾಲಿನ ಹಾದಿಯಲ್ಲಿ ತಮ್ಮ ಸಾಹಸ, ಪ್ರತಿಭೆಗಳನ್ನು ಪ್ರದರ್ಶಿಸುವ ಮೂಲಕ ನೋಡುಗರ ಪ್ರಶಂಸೆಗೆ ಪಾತ್ರರಾದರು. ಪಟ್ಟಣದ ಕ್ಲಬ್ ಮುಂಭಾಗದಿಂದ ಹೊರಟ ರ್ಯಾಲಿಯು ತಾಲೂಕಿನ ಗ್ರಾಮೀಣ ರಸ್ತೆಗಳಲ್ಲಿ ಸಂಚರಿಸಿದವು. ತಲ್ತಾರೆಶೆಟ್ಟಳ್ಳಿ, ಬೆಟ್ಟದಕೊಪ್ಪ, ಹರಗ, ಜಕ್ಕನಳ್ಳಿ, ಹಂಚಿನಳ್ಳಿ, ಕನ್ನಳ್ಳಿಕಟ್ಟೆ, ಬೆಟ್ಟದಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಚರಿಸಿ ಕ್ಲಬ್ ಆವರಣದಲ್ಲಿ ಮುಕ್ತಾಯಗೊಂಡಿತು. ಕೊಡಗು, ಹಾಸನ, ಸಕಲೇಶಪುರ, ಚಿಕ್ಕಮಗಳೂರು, ಮೈಸೂರು, ಮಂಗಳೂರು ವಿಭಾಗಗಳಿಂದ ಆಗಮಿಸಿದ್ದ 40 ರ್ಯಾಲಿ ತಂಡಗಳು ಆಫ್ ರೋಡ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದವು.

ರೋಚಕ ಸವಾರಿ: ಕೆಸರ ಹಾದಿಯಲ್ಲಿ ಜೀಪ್‌ಗಳು ಮುಂದೆ ಸಾಗಲಾಗದೆ, ಹಿಂದಕ್ಕೂ ಬರಲಾಗದ ಕಠಿಣ ಪರಿಸ್ಥಿತಿಗಳು ನಿರ್ಮಾಣವಾಗಿ ರ್ಯಾಲಿಯ ರೋಚಕತೆಯನ್ನು ಹೆಚ್ಚಿಸಿತ್ತು. ಬೆಟ್ಟದ ಕೊಪ್ಪದಲ್ಲಿ ವಾಹನಗಳು ಬೆಟ್ಟದ ತುತ್ತ ತುದಿಯಲ್ಲಿ ಅಪಾಯಕಾರಿ ಕಲ್ಲು ಬಂಡೆಗಳ ನಡುವೆ ತ್ರಾಸದಾಯಕವಾಗಿ ಚಲಿಸಿದವು. ಹೆಚ್ಚು ಮಳೆ ಬೀಳುವ ಪ್ರದೇಶ ಹಾಗೂ ಮಳೆಗಾಲವಾದ್ದರಿಂದ ಕಲ್ಲಿನ ಮೇಲೆ ಕಟ್ಟದ್ದ ಪಾಚಿಯಿಂದಾಗಿ ವಾಹನಗಳನ್ನು ನಿಲ್ಲಿಸಲಾಗದ ಸ್ಥಿತಿಯೂ ಕಂಡುಬಂತು. ಹಲವೆಡೆ ದಾರಿ ಕೆಸರುಮಯವಾಗಿತ್ತು. ರ್ಯಾಲಿ ಮಾರ್ಗ ಸವಾಲಿನಿಂದ ಕೂಡಿತ್ತು. ರ್ಯಾಲಿಯನ್ನು ಯಶಸ್ವಿಯಾಗಿ ಪೂರೈಸಿದ್ದೇವೆ ಎಂದು ರ್ಯಾಲಿಯಲ್ಲಿ ಪಾಲ್ಗೊಂಡವರು ಹರ್ಷ ವ್ಯಕ್ತಪಡಿಸಿದರು.

ಮಹಿಳಾ ರ್ಯಾಲಿ ಪಟುಗಳು
ನಾಲ್ಕು ಮಂದಿ ಮಹಿಳಾ ರ್ಯಾಲಿ ಪಟುಗಳೂ ಪಾಲ್ಗೊಂಡು ಗಮನ ಸೆಳೆದರೆ, ಸಾಕಷ್ಟು ರ್ಯಾಲಿ ಪಟುಗಳ ಪತ್ನಿಯರು ಸಹಾಯಕ ಚಾಲಕರಾಗಿ ಪಾಲ್ಗೊಂಡು ಸಾಥ್ ನೀಡಿದ್ದು ವಿಶೇಷವಾಗಿತ್ತು.

ಧೈರ್ಯ, ಸಾಹಸಗಳಿಗೆ ಸವಾಲೆಸೆಯುವ ಬೆಟ್ಟಗುಡ್ಡಗಳ ನಡುವಿನ ಕೆಸರುಮಯ ಹಾದಿಯಲ್ಲಿ ಯಶಸ್ವಿಯಾಗಿ ನಡೆದ 'ಎಸ್ಕೇಪ್ ಟು ನೇಚರ್ ಆಫ್ ರೋಡ್‌' ಜೀಪ್ ರ್ಯಾಲಿ ಪ್ರಕೃತಿಯ ಸೊಬಗನ್ನು ಕಣ್ಣಳತೆಯಲ್ಲಿ ರ್ಯಾಲಿ ಪಟುಗಳಿಗೆ ಉಣಬಡಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement