ಬಾಲಕನ ಅಪಹರಣ ಸುಖಾಂತ್ಯ: 7 ಆರೋಪಿಗಳ ಬಂಧನ
ಬೆಂಗಳೂರು: ಜ್ಞಾನ ಜ್ಯೋತಿ ನಗರದಿಂದ ಬಿಲ್ಡರ್ ಸುರೇಶ್ ಬಾಬು ಅವರ ಮಗ ಜೈ ಶಂಕರ್‌ನನ್ನು ರು. 80 ಲಕ್ಷ ಒತ್ತೆ ಹಣಕ್ಕಾಗಿ ಅಪಹರಿಸಿದ್ದ ಏಳು ಆರೋಪಿಗಳನ್ನು ಸಿಸಿಬಿ ಘಟಕ ಹಾಗೂ ಪಶ್ಚಿಮ ವಿಭಾಗ ಪೊಲೀಸರು ಬಂಧಿಸಿದ್ದಾರೆ.
ಉಲ್ಲಾಳ ಉಪನಗರ ನಿವಾಸಿ ಆಟೋ ಚಾಲಕ ಪ್ರಶಾಂತ್(19), ಚೇತನ್, ಸತೀಶ್, ಶ್ರೀನಿವಾಸ, ಮಣಿ, ಸ್ವಾಮಿ ಹಾಗೂ ಸುರೇಶ್ ಬಂಧಿತರು. ಎಲ್ಲಾ ಆರೋಪಿಗಳು 18 ರಿಂದ 25 ವರ್ಷದೊಳಗಿನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಮುಖ ಆರೋಪಿ ಪ್ರಶಾಂತ, ಜ್ಞಾನಜ್ಯೋತಿ ನಗರದಲ್ಲಿರುವ ಬಿಲ್ಡರ್ ಸುರೇಶ್ ಬಾಬು ಅವರ ಮನೆ ಸಮೀಪದ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಕೆಲಸ ಬಿಟ್ಟ ಬಳಿಕ ಆಟೋ ಓಡಿಸುತ್ತಿದ್ದ. ಆದರೆ, ಸ್ವಂತ ಮೆಡಿಕಲ್ ಶಾಪ್ ತೆರೆಯಬೇಕು ಎನ್ನುವ ಆಸೆ ಹೊಂದಿದ್ದ. ಆದರೆ ಅದಕ್ಕಾಗಿ ಹಣ ಹೊಂಚಬೇಕಿದ್ದರಿಂದ ತಾನು ಕೆಲಸ ಮಾಡುತ್ತಿದ್ದ ಮೆಡಿಕಲ್ ಶಾಪ್ ಸಮೀಪದಲ್ಲಿದ್ದ ಬಿಲ್ಡರ್ ಸುರೇಶ್ ಅವರ ಮಗನನ್ನು ಅಪಹರಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದರೆ ಅವರು ನೀಡುತ್ತಾರೆ ಎನ್ನುವ ದುರಾಲೋಚನೆ ಮಾಡಿದ್ದ. ಶುಕ್ರವಾರ ಸಂಜೆ ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕ ಇಂಡಿಕಾ ಕಾರಿನಲ್ಲಿ ಅಪಹರಿಸಿಕೊಂಡು ಹೋಗಲಾಗಿತ್ತು. ಆನಂತರ, ಕುಂಬಳಗೋಡುವಿನಲ್ಲಿರುವ ಪೆಪ್ಸಿ ಫ್ಯಾಕ್ಟರಿ ಸಮೀಪವಿರುವ ಆರೋಪಿ ಸುರೇಶ ವಾಸವಿದ್ದ ಬಾಡಿಗೆ ಮನೆಯಲ್ಲಿ ಕೂಡಿಟ್ಟಿದ್ದರು. ಅಲ್ಲಿಂದ ಕರೆ ಮಾಡಿ, ನಿಮ್ಮ ಮಗನನ್ನು ಅಪಹರಿಸಲಾಗಿದ್ದು ರು. 80 ಲಕ್ಷ ನೀಡದರೆ ಬಿಡುತ್ತೇವೆ. ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಕೂಡಲೇ ಸುರೇಶ್ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪಶ್ಚಿಮ ವಿಭಾಗ ಡಿಸಿಪಿ ಲಾಬೂರಾಮ್ ನೇತೃತ್ವದಲ್ಲಿ 8 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ ಸಿಸಿಬಿ ವಿಶೇಷ ತಂಡ ರಚಿಸಲಾಗಿತ್ತು.
ಆರೋಪಿಗಳಿಗೆ ಕರೆ ಮಾಡಿದ ಸುರೇಶ್ ಹಣ ತರುತ್ತಿದ್ದೇನೆ ಎಲ್ಲಿಗೆ ಬರಬೇಕು ಎಂದು ಕೇಳಿದ್ದರು. ಮೈಸೂರು ರಸ್ತೆ ನೈಸ್ ಜಂಕ್ಷನ್ ಬಳಿ ಬರಲು ಹೇಳಿದ್ದರು. ಶನಿವಾರ ಸಂಜೆ ಸುರೇಶ್ ಅವರು ಮುಂದೆ ಹೋಗುತ್ತಿದ್ದ ಪೊಲೀಸರ ತಂಡ ಮಫ್ತಿಯಲ್ಲಿ ಹಿಂಬಾಲಿಸಿತ್ತು. ಸುರೇಶ್ ಹಣ ನೀಡಲು ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಪೊಲೀಸರರನ್ನು ನೋಡಿದ ಆರೋಪಿಗಳು ಪರಾರಿಯಾಗಿದ್ದರು. ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರ ತಂಡ 7 ಜನರನ್ನು ಬಂಧಿಸಿ 2 ದ್ವಿಚಕ್ರ ವಾಹನಗಳು, ಇಂಡಿಕಾ ಕಾರನ್ನು ವಶಪಡಿಸಿಕೊಂಡಿದ್ದಾರೆ.