ಡಿವಿಎಸ್ ಪುತ್ರ ಕಾರ್ತಿಕ್ಗೌಡ ಇಂದು ವಿಚಾರಣೆಗೆ ಹಾಜರ್?
ಬೆಂಗಳೂರು: ನಟಿ ಮೈತ್ರಿಯಾ ಗೌಡಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಪುತ್ರ ಕಾರ್ತಿಕ್ಗೌಡ ಕೊನೆಗೂ ಪೊಲೀಸರ ವಿಚಾರಣೆಗೆ ಹಾಜರಾಗಲು ನಿರ್ಧರಿಸಿದ್ದಾನೆ ಎನ್ನಲಾಗಿದೆ.
ನಟಿ ಮೈತ್ರಿಯಾ ಗೌಡ ಪ್ರಕರಣ ಜಗ ಜಾಹೀರಾದ ಬಳಿಕ ತಲೆಮರೆಸಿಕೊಂಡಿದ್ದ ಕಾರ್ತಿಕ್ಗೌಡಗೆ ನಿನ್ನೆಯಷ್ಟೇ ಬೆಂಗಳೂರಿನ ಸೆಷನ್ಸ್ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಅಲ್ಲದೆ ಪೊಲೀಸರ ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸಬೇಕೆಂದು ನ್ಯಾಯಾಲಯ ಷರತ್ತು ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಕಾರ್ತಿಕ್ಗೌಡ ಇಂದು ಪ್ರಕರಣದ ತನಿಖಾಧಿಕಾರಿ ಓಂಕಾರಯ್ಯನವರ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
ಆಗಸ್ಟ್ 30ರಂದು ನಟಿ ಮೈತ್ರಿಯಾ ಗೌಡ ಕಾರ್ತಿಕ್ಗೌಡ ವಿರುದ್ಧ ವಂಚನೆ ಮತ್ತು ಅತ್ಯಾಚಾರದ ಆರೋಪ ಹೊರಿಸಿ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದೇ ದಿನ ಮಡಿಕೇರಿಯಲ್ಲಿ ಕುಶಾಲನಗರದ ಉದ್ಯಮಿ ನಾಣಯ್ಯ ಎಂಬವರ ಪುತ್ರಿ ರಾಜಶ್ರೀ (ಸ್ವಾತಿ) ಅವರೊಂದಿಗೆ ಕಾರ್ತಿಕ್ಗೌಡರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ಪ್ರಕರಣ ಬೆಳಕಿಗೆ ಬಂದ ಮರುದಿನದಿಂದ ಕಾರ್ತಿಕ್ಗೌಡ ನಾಪತ್ತೆಯಾಗಿದ್ದರು.
ಪ್ರಕರಣ ಸಂಬಂಧ ಆರ್.ಟಿ ನಗರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್ಗೌಡಗೆ ಎರಡು ಬಾರಿ ನೋಟೀಸ್ ನೀಡಿದರೂ ವಿಚಾರಣೆಗೆ ಬಂದಿರಲಿಲ್ಲ. ಏತನ್ಮಧ್ಯೆ ಕಾರ್ತಿಕ್ಗೌಡ ಸೆಷನ್ಸ್ ಕೋರ್ಟ್ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ನಿನ್ನೆ ಕೋರ್ಟ್ ಜಾಮೀನು ಮಂಜೂರು ಮಾಡಿತು.