ನೇತ್ರದಾನ ಮಾಡಬೇಕೇ? 104ಕ್ಕೆ ಕರೆ ಮಾಡಿದರೆ ಸಾಕು!
ನೀವು ನೇತ್ರದಾನ ಮಾಡಬೇಕೇ? ಹಾಗಿದ್ದಲ್ಲಿ...
ಬೆಂಗಳೂರು: ನೀವು ನೇತ್ರದಾನ ಮಾಡಬೇಕೇ? ಹಾಗಿದ್ದಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಎಲ್ಲಿ, ಮರಣದ ನಂತರ ಐ ಬ್ಯಾಂಕ್ನವರಿಗೆ ಕರೆ ಮಾಡಿ ಸುದ್ದಿ ಮುಟ್ಟಿಸುವವರಾರು.. ಎಂಬೆಲ್ಲ ಚಿಂತೆ ಇನ್ನು ಬೇಡ.
ನೀವು ರಾಜ್ಯದ ಯಾವುದೇ ಮೂಲೆಯಲ್ಲಿದ್ದರೂ ಸಹಾಯವಾಣಿ 104ಕ್ಕೆ ಕರೆ ಮಾಡಿದರೆ ಸಾಕು. ನೋಂದಣಿ ಮಾಡಿಲ್ಲದಿದ್ದರೂ ನೀವು ನೇತ್ರದಾನ ಮಾಡಬಹುದು. ಅಷ್ಟೇ ಅಲ್ಲ, ನಿಮ್ಮ ಕುಟುಂಬ ಸದಸ್ಯರು ಯಾರಾದರೂ ಮೃತಪಟ್ಟಲ್ಲಿ, ಅವರು ನೋಂದಣಿ ಮಾಡಿಸಿಲ್ಲದಿದ್ದರೂ ಅವರ ಕಣ್ಣುಗಳನ್ನೂ ದಾನ ಮಾಡಬಹುದು. ರಾಜ್ಯದಲ್ಲಿ ಮೊದಲ ಬಾರಿಗೆ ಇಂತಹ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಹಾಗಾಗಿ ನೇತ್ರದಾನ ಇನ್ನು ಸುಲಭವಾಗಲಿದೆ.
ರಾಜ್ಯದ 112 ಐ ಬ್ಯಾಂಕ್ಗಳು ಸಹ ಈ ಕಾರ್ಯಕ್ಕೆ ಕೈ ಜೋಡಿಸಿವೆ. ತಮಿಳುನಾಡಿನಲ್ಲಿ ಇಂತಹ ಯೋಜನೆ ಈಗಾಗಲೇ ಜಾರಿಯಲ್ಲಿದ್ದು, ರಾಜ್ಯದಲ್ಲಿ ಕಳೆದ 2 ತಿಂಗಳಿಂದ ಆರಂಭವಾಗಿದೆ. ಪ್ರಮುಖವಾಗಿ ನೇತ್ರ ದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಹಾಗೂ ನೇತ್ರದಾನವನ್ನು ಸುಲಭವಾಗಿಸುವ ಉದ್ದೇಶದಿಂದ ಇಂತಹ ಹೊಸ ಪ್ರಯತ್ನಕ್ಕೆ ಸರ್ಕಾರ ಕೈಹಾಕಿದೆ.
ಏನಿದು ಯೋಜನೆ?
ನಯನ ಜ್ಯೋತಿ ಎಂಬ ಸಂಸ್ಥೆ ತಮಿಳುನಾಡಿನಲ್ಲಿ ಇಂತಹ ಯೋಜನೆ ಆರಂಭಿಸಿದ್ದು, ರಾಜ್ಯದಲ್ಲಿ ಅಗತ್ಯಕ್ಕಿಂತ ಕಡಿಮೆ ನೇತ್ರದಾನವಾಗುತ್ತಿರುವ ಹಿನ್ನೆಲೆಯಲ್ಲಿ ಆ ಸಂಸ್ಥೆ ಸಹಯೋಗದೊಂದಿಗೆ ರಾಜ್ಯ ಸರ್ಕಾರ ಈ ಯೋಜನೆ ಆರಂಭಿಸಿದೆ. ನೇತ್ರದಾನ ಮಾಡಲು ನೋಂದಣಿ ಮಾಡಿಸಿಕೊಳ್ಳಬೇಕಾದ ಹಾಗೂ ಐ ಬ್ಯಾಂಕ್ಗೆ ಕರೆ ಮಾಡಿ ತಿಳಿಸುವ ಹಳೆಯ ಪದ್ಧತಿ ಈಗಿಲ್ಲ. ಯಾರನ್ನು ಸಂಪರ್ಕಿಸಬೇಕು ಎಂಬುದು ತಿಳಿಯದೆ ನೇತ್ರದಾನ ಮಾಡಲಾಗದ ಪರಿಸ್ಥಿತಿಯೂ ಇಲ್ಲ. ದಿನದ 24 ಗಂಟೆಯೂ ಈ ಸೇವೆ ಲಭ್ಯವಿದ್ದು, ಸಹಾಯವಾಣಿಯ ಮುಖ್ಯ ಕಚೇರಿ ಹುಬ್ಬಳ್ಳಿಯಲ್ಲಿದೆ.
ನೀವೇನು ಮಾಡಬೇಕು?
ನಿಮಗೆ ತಿಳಿದವರು ಮೃತಪಟ್ಟು ಅವರ ಕಣ್ಣನ್ನು ದಾನ ಮಾಡಬೇಕು ಎಂದಾದಲ್ಲಿ ಸಹಾಯವಾಣಿ 104ಕ್ಕೆ ಕರೆ ಮಾಡಿದಲ್ಲಿ ಅವರು ನಿಮ್ಮ ವಿಳಾಸ ಹಾಗೂ ಅಗತ್ಯ ಮಾಹಿತಿ ಪಡೆದುಕೊಳ್ಳುತ್ತಾರೆ. ನಂತರ ಹತ್ತಿರದ ಐ ಬ್ಯಾಂಕ್ ಸಂಪರ್ಕಿಸಿ ಅವರಿಗೆ ನಿಮ್ಮ ಬಗ್ಗೆ ಮಾಹಿತಿ ನೀಡುತ್ತಾರೆ. ಆಗ ಐ ಬ್ಯಾಂಕ್ ಸಿಬ್ಬಂದಿಯೇ ಸ್ಥಳಕ್ಕೆ ಬಂದು ಕಣ್ಣುಗಳನ್ನು ತೆಗೆದುಕೊಂಡು ಹೋಗುತ್ತಾರೆ. ನಂತರ ಸರದಿಯಲ್ಲಿರುವ ಅಂಧರಿಗೆ ಆ ಕಣ್ಣುಗಳನ್ನು ನೀಡುತ್ತಾರೆ.
ಜಾಗೃತಿ ಹೆಚ್ಚಬೇಕು
ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ರಾಜ್ಯದಲ್ಲಿ ಸಾಕಷ್ಟು ಮಂದಿ ಅಂಧರಿದ್ದಾರೆ. ಕಣ್ಣುಗಳನ್ನು ದಾನ ಮಾಡಿದಲ್ಲಿ ಎಷ್ಟೋ ಅಂಧರ ಬಾಳು ಬೆಳಕಾಗುತ್ತದೆ. ಈ ಹಿಂದೆ ಇದ್ದ ನೇತ್ರದಾನದ ಪದ್ಧತಿಯಿಂದ ಜನರಿಗೆ ತೊಂದರೆಯಾಗುತ್ತಿತ್ತು. ಹಾಗಾಗಿ ಅವರಿಗೆ ಸುಲಭವಾಗಲಿ ಹಾಗೂ ಇನ್ನಾದರೂ ಹೆಚ್ಚೆಚ್ಚು ಮಂದಿ ನೇತ್ರದಾನ ಮಾಡಲಿ ಎಂಬ ಉದ್ದೇಶದಿಂದ ಯೋಜನೆ ಜಾರಿಗೆ ತರಲಾಗಿದೆ. ಐ ಬ್ಯಾಂಕ್ಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜನರೂ ಅದೇ ರೀತಿ ಸ್ಪಂದಿಸಬೇಕಿದ್ದು, ಅವರಲ್ಲಿ ಈ ಬಗ್ಗೆ ಜಾಗೃತಿ ಹೆಚ್ಚಬೇಕಿದೆ. ಸದ್ಯ ಉತ್ತರ ಕರ್ನಾಟಕದ ಭಾಗದಲ್ಲಿ ಇದಕ್ಕೆ ಕೊಂಚ ಸ್ಪಂದನ ದೊರೆತಿದ್ದು, ಇದುವರೆಗೂ ಸುಮಾರು 370ಕ್ಕೂ ಅಧಿಕ ಕರೆ ಬಂದಿವೆ ಎಂದಿದ್ದಾರೆ.
ಯಾರು ದಾನ ಮಾಡಬಹುದು?
ಎಚ್ಐವಿ ಹಾಗೂ ರೇಬೀಸ್ ಕಾಯಿಲೆ ಇದ್ದಲ್ಲಿ ಅಂತರಹವರ ಕಣ್ಣುಗಳನ್ನು ಬೇರೆಯವರಿಗೆ ಅಳವಡಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಮೃತಪಟ್ಟವರಿಗೆ ಯಾವ ಕಾಯಿಲೆ ಇತ್ತು ಎಂಬುದನ್ನು ಯಾರೂ ಹೇಳುವುದಿಲ್ಲ. ಹಾಗಾಗಿ ವೈದ್ಯರೇ ರಕ್ತ ಪಡೆದು ಪರಿಶೀಲಿಸಿ ನಂತರ ಕಣ್ಣುಗಳನ್ನು ತೆಗೆಯುತ್ತಾರೆ.
ಒಂದು ವರ್ಷದ ಮಗವಿನಿಂದ 104 ವರ್ಷದ ವಯೋವೃದ್ಧರವರೆಗೂ ಕಣ್ಣುಗಳನ್ನು ದಾನ ಮಾಡಬಹುದು.
ಶಾಂತ ತಮ್ಮಯ್ಯ