ಪೀಣ್ಯ ಸ್ಯಾಟಲೈಟ್ ಬಸ್ ನಿಲ್ದಾಣ ಕಾರ್ಯಾರಂಭ
ಬೆಂಗಳೂರು: ಪ್ರಯಾಣಿಕರೇ ಗಮನಿಸಿ. ರಾಜಧಾನಿ ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹಾಗೂ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸುವವರಾದರೆ, ಒಂದು ಕ್ಷಣ ಕೇಳಿ.
ನಾಳೆಯೋ, ನಾಡಿದ್ದೋ ಊರಿಗೆ ಹೊರಡುವ ಯೋಜನೆಯಿದ್ದವರೂ ಕೊಂಚ ಗಮನಿಸಿ. ಏಕೆಂದರೆ ನಿಮ್ಮ ಊರಿನ ಬಸ್ಸು ಹಿಡಿಯಬೇಕಾಗಿದ್ದು ಮೆಜೆಸ್ಟಿಕ್‌ನಲ್ಲಿರುವ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಅಲ್ಲ. ಹಾಗಂತ ಯಶವಂತಪುರವೂ ಅಲ್ಲ. ಜಾಲಹಳ್ಳಿ ಕ್ರಾಸ್‌ನಿಂದಲೂ ಆಚೆ, ಪೀಣ್ಯ ಎರಡನೇ ಹಂತದ ಈಚೆಗೆ ಹೋಗಬೇಕು.
ನಗರದಲ್ಲಿನ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದೊಂದಿಗೆ ಪೀಣ್ಯದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮ ನೂತನವಾಗಿ ನಿರ್ಮಿಸಿರುವ ಸ್ಯಾಟ್‌ಲೈಟ್ ಬಸ್ ನಿಲ್ದಾಣ ಇಂದಿನಿಂದ ವಿಧ್ಯುಕ್ತವಾಗಿ ಕಾರ್ಯಾರಂಭ ಮಾಡಿದೆ. ಸದ್ಯಕ್ಕೆ ದಾವಣಗೆರೆ ಮತ್ತು ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯ 146 ವೇಗದೂತ ಬಸ್ಸುಗಳು ಬೆಳಗ್ಗೆ ಇಲ್ಲಿಂದಲೇ ಹೊರಡಲಿವೆ. ಹೀಗಾಗಿ ವೇಗದೂತ ಬಸ್ಸುಗಳಲ್ಲಿ ಈ ಊರುಗಳಿಗೆ ಪ್ರಯಾಣ ಬೆಳೆಸುವ ನಗರದ ನಿವಾಸಿಗಳು, ಪರ ಊರುಗಳಿಂದ ಬಂದವರು ಪೀಣ್ಯಕ್ಕೆ ಮುಖ ಮಾಡಲೇಬೇಕು.
ಈ ಮಾರ್ಗದಲ್ಲಿನ ವೇಗದೂತ ಬಸ್ಸುಗಳನ್ನು ಹೊರತುಪಡಿಸಿದರೆ, ಹುಬ್ಬಳ್ಳಿ ಹಾಗೂ ದಾವಣಗೆರೆ ವಿಭಾಗದ ಐರಾವತ, ಅಂಬಾರಿ, ಗೋಲ್ಡ್ ಕ್ಲಾಸ್, ರಾಜಹಂಸ ಹಾಗೂ ಸೆಮಿ ಡಿಲಕ್ಸ್ ಬಸ್ಸುಗಳು ಎಂದಿನಂತೆ ಕೆಂಪೇಗೌಡ ಬಸ್ ನಿಲ್ದಾಣದಿಂದಲೇ ಹೊರಡುತ್ತಿವೆ. ಮುಂದೆ ಹಂತಹಂತವಾಗಿ ಇವೂ ಪೀಣ್ಯದಿಂದಲೇ ಸಂಚಾರ ಆರಂಭಿಸಲಿವೆ.
ಪೀಣ್ಯ ನೂತನ ಬಸ್ ನಿಲ್ದಾಣದಲ್ಲಿ ಬಸ್ಸು ನಿಲುಗಡೆಗೆ ವಿಶೇಷ ಪ್ಲಾಟ್ ಫಾರ್ಮ್, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಶೌಚಾಲಯ, ಉಪಹಾರ ಗೃಹ ಸೇರಿದಂತೆ ಬಸ್ಸು ನಿಲ್ದಾಣವನ್ನು ಸುಸಜ್ಜಿತವಾಗಿಯೇ ನಿರ್ಮಿಸಲಾಗಿದೆ.
ರಾಜಧಾನಿ ಬೆಂಗಳೂರಿನಿಂದ ಮಂಗಳೂರು, ಉಡುಪಿ, ಹಾಗೂ ತುಮಕೂರು ಮಾರ್ಗವಾಗಿ ಶಿವಮೊಗ್ಗ ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಬಿಜಾಪುರ, ಕಾರವಾರ, ರಾಯಚೂರು ಹಾಗೂ ಗುಲ್ಬರ್ಗಾ ಸೇರಿದಂತೆ ರಾಜ್ಯದ 17ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ರಸ್ತೆ ಸಾರಿಗೆಯ ಒಂದು ಸಾವಿರ ಬಸ್ಸುಗಳು ಇನ್ನುಮುಂದೆ ಇಲ್ಲಿಂದಲೇ ಸಂಚರಿಸಲಿವೆ.