ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ರಾಜ್ಯ ಸರ್ಕಾರದಿಂದ ಕಾಲೇಜು, ವಿದ್ಯಾರ್ಥಿಗಳಿಗೆ ಬ್ಲ್ಯಾಕ್‌ಮೇಲ್?

ವೃತ್ತಿ ಶಿಕ್ಷಣ ಸಂಸ್ಥೆಗಳ ಶುಲ್ಕ ಹಾಗೂ...

Mainashree
Updated On : 10 Sept 2014, 10:21 am

ವಿಶೇಷ ವರದಿ
ಬೆಂಗಳೂರು:
ವೃತ್ತಿ ಶಿಕ್ಷಣ ಸಂಸ್ಥೆಗಳ ಶುಲ್ಕ ಹಾಗೂ ಪ್ರವೇಶ ನಿಯಂತ್ರಣ ಕಾಯಿದೆ ಹೆಸರು ಹೇಳಿಕೊಂಡು ವಿದ್ಯಾರ್ಥಿಗಳು, ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿಗಳಿಗೆ ರಾಜ್ಯ ಸರ್ಕಾರ ಬ್ಲ್ಯಾಕ್ ಮೇಲ್ ಮಾಡುತ್ತಿದೆ.

2006ರ ಕಾಯಿದೆ ಅನುಷ್ಠಾನ ಮಾಡುವುದು ಸುಲಭ ಸಾಧ್ಯವಲ್ಲ ಎಂದು ಅರಿವಾದ ಬಳಿಕ ಈಗ ರಾಜ್ಯ ಸರ್ಕಾರ ಒಂದೊಂದೆ ಹೇಳಿಕೆ ನೀಡಲು ಆರಂಭಿಸಿದೆ. ಒಂದೇ ಪ್ರವೇಶ ಪರೀಕ್ಷೆ ಹಾಗೂ ಶುಲ್ಕ ರಿಯಾಯಿತಿ ಎರಡೂ ಸಾಧ್ಯವಿಲ್ಲ. ಯಾವುದು ಬೇಕೋ ನೀವೇ ಆಯ್ಕೆ ಮಾಡಿ ಎಂದಿರುವುದು ಕೂಡ ಇದರ ಒಂದು ಭಾಗವಷ್ಟೆ.

ವಿಚಿತ್ರವೆಂದರೆ ಒಂದೇ ಪ್ರವೇಶ ಪರೀಕ್ಷೆ ಹಾಗೂ ಶುಲ್ಕ ರಿಯಾಯಿತಿಗೆ ಯಾವುದೇ ಸಂಬಂಧವಿಲ್ಲ. ಸುಮ್ಮನೇ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ದಿಕ್ಕು ತಪ್ಪಿಸಲು ಈ ರೀತಿ ಹೇಳಲಾಗುತ್ತಿದೆ. ಇದಲ್ಲದೇ ಪ್ರತಿಭಾನ್ವಿತ ಹಾಗೂ ಬಡ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಆರ್ಥಿಕ ನೆರವು ನೀಡಲು ಸಾಧ್ಯವಿಲ್ಲ ಎನ್ನುವುದನ್ನು ಈ ಧಾಟಿಯಲ್ಲಿ ಹೇಳಲಾಗುತ್ತಿದೆಯಷ್ಟೆ.

2006ರ ಕಾಯಿದೆ ಅನ್ವಯ ಎಸ್‌ಸಿ, ಎಸ್‌ಟಿಗಳಿಗೆ ಶೆ.50ರಷ್ಟು ಸೀಟನ್ನು ಮೀಸಲಿಡಬೇಕಾಗುತ್ತದೆ. ಆಗ ಆ ವಿದ್ಯಾರ್ಥಿಗಳಿಗೆ ಸರ್ಕಾರವೇ ಸಂಪೂರ್ಣ ಶುಲ್ಕ ತುಂಬಿಕೊಡಬೇಕಾದ ಅನಿವಾರ್ಯ ಪರಿಸ್ಥಿಯನ್ನು ಎದುರಿಸಲಿದೆ. ಹಾಗೆಯೇ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ಶುಲ್ಕದಲ್ಲಿ ಅಲ್ಪ ಪ್ರಮಾಣದ ವಿನಾಯಿತಿ ನೀಡದಿದ್ದರೆ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಗಗನ ಕುಸುಮವಾಗಿ ಬಿಡುತ್ತದೆ. ಸರ್ಕಾರದ ಮೇಲೆ ಹೆಚ್ಚುವರಿಯಾಗಿ ಬೀಳಲಿರುವ ಆರ್ಥಿಕ ಹೊರೆಯನ್ನು ಅರ್ಥ್ಯೈಸಿಕೊಂಡಿರುವ ವೈದ್ಯ ಶಿಕ್ಷಣ ಸಚಿವರು ಭಿನ್ನರಾಗ ಹಾಡುತ್ತಿದ್ದಾರೆ.

ಇನ್ನು ಒಂದೇ ಪ್ರವೇಶ ಪರೀಕ್ಷೆ ನಡೆಸಬೇಕೆಂದರೆ ವೈದ್ಯ ಕೋರ್ಸ್‌ಗಳಿಗೆ ರಾಷ್ಟ್ರೀಯ ಪ್ರವೇಶ ಪರೀಕ್ಷೆ ಮಾಡಬೇಕಾಗುತ್ತದೆ. ಖಾಸಗಿ ಎಂಜಿನಿಯಂರಿಂಗ್ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಪಾಂಡುರಂಗ ಶೆಟ್ಟಿ ತಿಳಿಸಿರುವ ಪ್ರಕಾರ, ಸರ್ಕಾರದ ಪ್ರವೇಶ ಪರೀಕ್ಷೆಗೆ ಯಾವುದೇ ವಿರೋಧವಿಲ್ಲ. ಆದರೆ ವೈದ್ಯ ಸೀಟುಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಷ್ಟೆ.

ಪ್ರಸ್ತುತ ನಿಯಮವೇ ಕಾಯಿದೆ?: ಉನ್ನತ ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ ಪ್ರಸ್ತುತ ಜಾರಿಯಲ್ಲಿರುವ ಪ್ರವೇಶ ಪ್ರಕ್ರಿಯೆ ನಿಯಮಕ್ಕೆ ಕಾನೂನು ರೂಪ ಕೊಡುವ ಸಾಧ್ಯತೆ ಇದೆ. ಏಕೆಂದರೆ 2006ರ ಕಾಯಿದೆ ಜಾರಿಗೆ ಬಂದರೆ ಶುಲ್ಕ ವಿಪರೀತವಾಗಿ ಹೆಚ್ಚಲಿದೆ. ಆ ಹೆಚ್ಚುವರಿ ಶುಲ್ಕಕ್ಕೆ ಸಬ್ಸಿಡಿ ನೀಡುವುದಾಗಿ ಸರ್ಕಾರ ಹೇಳಿಕೆ ನೀಡಿದ್ದರೂ, ಆರ್ಥಿಕವಾಗಿ ಕಷ್ಟ ಸಾಧ್ಯ ಎನ್ನುವುದು ತಿಳಿಯುತ್ತಿದ್ದಂತೆ ಹಿಂದಿನ ನಿಯಮವನ್ನೇ ಕಾಯಿದೆ ರೂಪಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಶುಲ್ಕ ನಿಯಂತ್ರಣಕ್ಕೆ ಪ್ರತ್ಯೇಕ ಪ್ರಾಧಿಕಾರ ರಚಿಸಿ ಸರ್ಕಾರ ಕೈತೊಳೆದುಕೊಳ್ಳುವ ಸಾಧ್ಯತೆಯೂ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement