ತಾಪಂಗಳ ಚುನಾವಣೆ ಪಂಚಾಯಿತಿಯೇ ಬೇಡ
ಜನತಾ ಪರಿವಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆಯ ಪರ ಮಾತನಾಡಿರುವ...
ಕನ್ನಡಪ್ರಭ ವಾರ್ತೆ, ಬೆಂಗಳೂರು, ಸೆ.10:
ಜನತಾ ಪರಿವಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆಯ ಪರ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸದ್ಯದ ಸನ್ನಿವೇಶದಲ್ಲಿ ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಶ್ರಯದಲ್ಲಿ ಬುಧವಾರ ನಡೆದ ರಾಜ್ಯ ಪಂಚಾಯತ್ ಪರಿಷತ್ ಸಭೆಯಲ್ಲಿ ಮಾತನಾಡಿ, 'ಜಿಲ್ಲಾ ಹಾಗೂ ಗ್ರಾಮ ಪಂಚಾಯತ್‌ಗೆ ಹೋಲಿಸಿದರೆ ತಾಲೂಕು ಪಂಚಾಯತ್‌ಗಳಿಗೆ ಕೆಲಸ ಇರುವುದಿಲ್ಲ. ಹೀಗಾಗಿ ನನ್ನ ಪ್ರಕಾರ ಇದಕ್ಕೆ ಚುನಾವಣೆ ನಡೆಸುವ ಅಗತ್ಯವಿಲ್ಲ. ಬದಲಾಗಿ ತಾ.ಪಂ ಸದಸ್ಯರನ್ನು ನಾಮ ನಿರ್ದೇಶನ ಮಾಡುವುದೇ ಸೂಕ್ತ' ಎಂದರು.
ಹಿಂದೆ ಜನತಾ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಅಬ್ಧುಲ್ ನಜೀರ್ ಸಾಬ್ ಅವರು ಜಾರಿಗೆ ತಂದಿದ್ದ ಪಂಚಾಯತ್ ರಾಜ್ ಕಾಯ್ದೆಯನ್ನು ನಾನು ನೋಡಿದ್ದೆ. ಅದರಲ್ಲಿ ತಾಲೂಕು ಪಂಚಾಯತ್ ಕಲ್ಪನೆ ಇರಲಿಲ್ಲ. ಬದಲಿಗೆ ಸಲಹಾ ಸಮಿತಿಗಳಿದ್ದವು. ಆಗ ಜಿಲ್ಲಾ ಮತ್ತು ಮಂಡಲ ಪಂಚಾಯತ್ ಅಧ್ಯಕ್ಷರಿಗೆ ಹೆಚ್ಚು ಅಧಿಕಾರವಿತ್ತು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ ಇತ್ತು. ಆದರೆ ನೀವೆಲ್ಲ ಅದಕ್ಕೆ ವಿರೋಧ ಮಾಡಿದಿರಿ ಎಂದು ಕಾಣುತ್ತದೆ ಎಂದು ವೇದಿಕೆಯಲ್ಲಿದ್ದ ಅಧಿಕಾರಿಗಳನ್ನು ಉದ್ದೇಶಿಸಿ ವ್ಯಂಗ್ಯವಾಡಿದರು.