ಅಮೆರಿಕ ಕಂಪನಿಗಳಿಂದ 14,400 ಕೋಟಿ ಹೂಡಿಕೆ
ರಾಜ್ಯದಲ್ಲಿ ಬಂಡವಾಳ ಹೂಡಲು ಅಮೆರಿಕದ ಹಲವು ಕಂಪನಿಗಳು ಆಸಕ್ತಿ ತೋರಿದ್ದು, ಸುಮಾರು...
ಕನ್ನಡಪ್ರಭ ವಾರ್ತೆ, ಬೆಂಗಳೂರು, ಸೆ.11
ರಾಜ್ಯದಲ್ಲಿ ಬಂಡವಾಳ ಹೂಡಲು ಅಮೆರಿಕದ ಹಲವು ಕಂಪನಿಗಳು ಆಸಕ್ತಿ ತೋರಿದ್ದು, ಸುಮಾರು ರು.14, 400 ಕೋಟಿ ಹೂಡಿಕೆ ಬಗ್ಗೆ ಮಾತುಕತೆ ಆರಂಭವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಭಾರತದಲ್ಲಿರುವ ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್‌ನ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯರೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಇಂಟೆಲ್ ಸಂಸ್ಥೆ ರು.600 ಕೋಟಿ ಹೂಡಿಕೆ ಮಾಡಿದ್ದು, ಇನ್ನೂ ರು.400 ಕೋಟಿಯನ್ನು ವಿಸ್ತರಣೆಗಾಗಿ ಹೂಡಿಕೆ ಮಾಡಲಿದೆ. ಹನಿವೆಲ್ ರು.1400 ಕೋಟಿ, ಫೆಕ್ಸಿಮೆಬ್ ರು.400 ಕೋಟಿ ಹಾಗೂ ಅಮೆಜಾನ್. ಕಾಮ್ ರು.12,000 ಕೋಟಿ ಹೂಡಿಕೆ ಮಾಡಲು ಮುಂದಾಗಿವೆ.
ಒಟ್ಟಾರೆ ರು.14,400 ಕೋಟಿ ಹೂಡಿಕೆ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು ಎಂದರು.
ಅಮೆಜಾನ್.ಕಾಮ್ ಹೂಡಿಕೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಅವರು ಕೇಳಿರುವ ರಿಯಾಯಿತಿ ಹಾಗೂ ಅದನ್ನು ಬ್ಲ್ಯಾಕ್‌ಲಿಸ್ಟ್ ಮಾಡಿರುವ ಬಗ್ಗೆ ಮತ್ತೊಂದು ಸಭೆ ನಡೆಸಿ ತೀರ್ಮಾನಿಸಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಜ್ಯದ ಟಯರ್-2, 3 ನಗರಗಳಲ್ಲಿ ಹೂಡಿಕೆ ಮಾಡಬೇಕು ಎಂದು ತಿಳಿಸಲಾಗಿದೆ. ಇದಕ್ಕೆ ಕಂಪನಿಗಳು ಆಸಕ್ತಿಹೊಂದಿವೆ. ಅವರಿಗೆ ನೀಡಬೇಕಿರುವ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸುವ ಬಗ್ಗೆಯೂ ರಾಜ್ಯ ಸರ್ಕಾರ ಭರವಸೆ ನೀಡಿದೆ ಎಂದರು.
ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್‌ನ ರಾಷ್ಟ್ರೀಯ ಕಾರ್ಯನಿರ್ವಾಹಕ ಅಧ್ಯಕ್ಷ ಅಜಯ್ ಸಿಂಗ್, ಅಮೆರಿಕ ರಾಯಭಾರಿಯವರ ಸಚಿವರ ಸಲಹೆಗಾರ ಜಾನ್ ಮೆಕಾಸ್ಲೀನ್, ಅಧ್ಯಕ್ಷ ಸಂಜಯ ಕೌಲ್ ಸೇರಿದಂತೆ 32 ಜನರು ಸಭೆಯಲ್ಲಿ ಭಾಗವಹಿಸಿದ್ದರು ಎಂದು ಮುಖ್ಯಮಂತ್ರಿಯವರು ತಿಳಿಸಿದರು.