ಇಬ್ರಾಹಿಂಗೆ ಶೋಕಾಸ್ ನೋಟಿಸ್?
ಕಾಂಗ್ರೆಸ್ ಪದಾಧಿಕಾರಿಗಳ ಒತ್ತಾಯ! ಸೂಕ್ತ ನಿರ್ಣಯ- ಪರಮೇಶ್ವರ್
ಬೆಂಗಳೂರು: ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಮನ ದುಂಬಿ ಹೊಗಳಿದ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರಿಗೆ ಶೋಕಾಸ್ ನೋಟಿಸ್ ನೀಡುವಂತೆ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಆಗ್ರಹಿಸಲಾಗಿದೆ.
ಜೆಡಿಎಸ್ ಮತ್ತು ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ, ಕಾಂಗ್ರೆಸ್ ಹೋರಾಟ ನಡೆಸುತ್ತಿದೆ. ಆದರೆ ಇಬ್ರಾಹಿಂ ಅವರಂಥ ನಾಯಕರು ವೇದಿಕೆಯಲ್ಲಿ ಕುಳಿತು ಅವರನ್ನು ಹೊಗಳಿ ಬರುತ್ತಾರೆ. ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡುವುದು ಮಾತ್ರವಲ್ಲ, ರಾಜಕೀಯವಾಗಿ ಬೇರೆ ಬೇರೆ ಸಂದೇಶ ರವಾನೆಯಾಗುತ್ತದೆ. ಹೋರಾಟ ನಡೆಸುವಾಗ ಕಾರ್ಯಕರ್ತರಲ್ಲಿ ಇಂಥ ಕಲ್ಪನೆ ಇರುವುದಿಲ್ಲ. ಆದರೆ ಅಧಿಕಾರ ಅನುಭವಿಸುವ ನಾಯಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಧೋರಣೆ ಬದಲಿಸುತ್ತಾರೆ ಎಂದು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿ.ಎಂ. ಇಬ್ರಾಹಿಂ ಅವರಿಗೆ ಪಕ್ಷದ ವತಿಯಿಂದ ಶೋಕಾಸ್ ನೋಟಿಸ್ ನೀಡಬೇಕು ಎಂದು ಆಗ್ರಹಿಸಿರುವ ಪದಾಧಿಕಾರಿಗಳನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ ಸುಮ್ಮನಾಗಿಸಿದ್ದು, ಸೂಕ್ತ ನಿರ್ಣಯ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.