ಬೆಂಗಳೂರು: ಸಿಳ್ಳೆ, ಕೇಕೆ, ಚಪ್ಪಾಳೆ, ಅಭಿಮಾನದ ಹೊಳೆ, ರವೀಂದ್ರ ಕಲಾಕ್ಷೇತ್ರದ ತುಂಬಾ ಕ್ರೇಜಿಸ್ಟಾರ್ ಪ್ರಶಂಸೆಯ ಹೂ ಮಳೆ....!
ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ 50ನೇ ಬೆಳ್ಳಿ ಹೆಜ್ಜೆ ಸುವರ್ಣ ಸಂಭ್ರಮ ಕೇಜ್ರಿಸ್ಟಾರ್ ಅಭಿಮಾನಿಗಳ ಅಭಿಮಾನದ ಸುರಿಮಳೆಯಲ್ಲಿ ವಿಶೇಷ ರಂಗು ಪಡೆದುಕೊಂಡಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಚಿತ್ರರಸಿಕರು, ತಮ್ಮ ನೆಚ್ಚಿನ ನಟರನ್ನು ವೇದಿಕೆಯಲ್ಲಿ ಅಭಿನಂದಿಸಿ, ಗೌರವಿಸಿದಾಗ ಭಾರಿ ಚಪ್ಪಾಳೆ, ಕರತಾಡನ ಪ್ರದರ್ಶಿಸಿ, ಅಭಿಮಾನ ಮೆರೆದರು. ಅದರಲ್ಲೂ ಬೆಳ್ಳಿ ಹೆಜ್ಜೆಯ ವಿಶೇಷ ಅತಿಥಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿದ ಸಂದರ್ಭದಲ್ಲಂತೂ ಕಲಾಕ್ಷೇತ್ರದ ಛಾವಣಿಯೇ ಕಿತ್ತು ಹಾರುವಂತೆ ಅಭಿಮಾನಿಗಳು ಹ್ಹೋ... ಎಂದು ಕೂಗಿ ಹರ್ಷ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.
ಸಮಾರಂಭವನ್ನು ಉದ್ಘಾಟಿಸಿ ಹಾಗೂ ರವಿಚಂದ್ರನ್ ಸೇರಿದಂತೆ ಬೆಳ್ಳಿ ಹೆಜ್ಜೆಯ ಅತಿಥಿಗಳನ್ನು ಅಭಿನಂದಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಟ, ನಿರ್ದೇಶಕ ರವಿಚಂದ್ರನ್ ಬಹುಮುಖ ಪ್ರತಿಭೆಯ ಅಪರೂಪದ ಕಲಾವಿದ ಎಂದು ಬಣ್ಣಿಸಿದರು.
ಕನ್ನಡ ಚಲನಚಿತ್ರ ರಂಗಕ್ಕೆ ತಮ್ಮ ಚಿತ್ರಗಳ ಮೂಲಕ ಹೊಸತನ, ಹೊಸ ಆಯಾಮ ಹಾಗೂ ಪ್ರಯೋಗಶೀಲತೆಯ ರೂಪವನ್ನು ಕೊಟ್ಟ ಕೀರ್ತಿ ರವಿಚಂದ್ರನ್ ಅವರಿಗೆ ಸಲ್ಲುತ್ತದೆ. ಅವರೇ ಹೇಳಿಕೊಂಡಂತೆ ಶಾಲೆಗೆ ಹೋಗದೇ ಇದ್ದಿದ್ದರಿಂದ ಅವರು ಇಂತಹ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿದೆ. ಒಂದು ವೇಳೆ ಶಾಲೆಗೆ ಹೋಗಿದ್ದರೆ ಅವರು ಸಾಗುತ್ತಿದ್ದ ದಾರಿಯೇ ಭಿನ್ನವಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟರು. ಕನ್ನಡ ಚಿತ್ರರಂಗದಲ್ಲಿ ನಿಮ್ಮ ಪ್ರಯೋಗಶೀಲತೆ ಇತಿಹಾಸದಲ್ಲಿ ಉಳಿಯುತ್ತದೆ. ಹೆದರಬೇಡಿ, ನಿಮ್ಮ ಪ್ರಯತ್ನ ಮುಂದುವರೆಸಿ, ಜನರ ಬೆಂಬಲ, ದೇವರ ಬೆಂಬಲ ಸಿಕ್ಕೇ ಸಿಗುತ್ತದೆ. ಜನರು ಒಳ್ಳೆಯವರನ್ನು ಕೈಬಿಡುವುದಿಲ್ಲ ಸ್ವೀಕರಿಸುತ್ತಾರೆ ಮೆಚ್ಚುತ್ತಾರೆ ಎನ್ನುವುದು ನಮ್ಮ ಭಾವನೆ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಸಹಾಯ ಮರೆಯೋದಿಲ್ಲ
ಕೆಎಸ್‌ಎಫ್‌ಸಿಯಲ್ಲಿ ತೆಗೆದುಕೊಂಡಿದ್ದ ರು. 1 ಕೋಟಿ ಸಾಲಕ್ಕೆ ಬ್ಯಾಂಕ್‌ನಲ್ಲಿ ನಿಲ್ಲಬೇಕಾಗಿತ್ತು. ಒಂದು ದಿನ ಹೀಗೆ ಕೆಎಸ್‌ಎಫ್‌ಸಿನಲ್ಲಿ ನಿಂತಿದ್ದೆ. ಅಲ್ಲಿಗೆ ಸಿದ್ದರಾಮಯ್ಯ ಬಂದರು. ಆಗ ಅವರು ಹಣಕಾಸು ಸಚಿವರಾಗಿದ್ದರು. ಏನು ಇಲ್ಲಿದ್ದೀರಾ? ಎಂದು ಪ್ರಶ್ನಿಸಿದರು. ಕಾರಣ ತಿಳಿದು, ಅವರು ಮ್ಯಾನೇಜರ್‌ಗೆ ಹೇಳಿದ್ದು ಒಂದೇ ಮಾತು. ಏನ್ರೀ... ರು. 1 ಕೋಟಿ ಸಾಲಕ್ಕೆ ಅವ್ರನ್ನ ಇಲ್ಲಿ ನಿಲ್ಲಿಸಿದ್ದೀರಾ...? ನಾನಿದ್ದೇನೆ ಅವರನ್ನು ಕಳುಹಿಸಿ ಎಂದು ದೊಡ್ಡತನ ಮೆರೆದಿದ್ದರು. ಅವರದನ್ನು ಮರೆತಿರಬಹುದು. ನಾನು ಮರೆತಿಲ್ಲ. ಕಷ್ಟದಲ್ಲಿ ಸಹಾಯ ಮಾಡಿದವರನ್ನು, ನೆರವಿಗೆ ನಿಂತವರನ್ನು ಎಂದಿಗೂ ಮರೆಯೋನಲ್ಲ ಈ ರವಿಚಂದ್ರನ್. ಇದನ್ನು ಹೇಳಲು ಸಂದರ್ಭ ಬಂದಿರಲಿಲ್ಲ. ಇವತ್ತು ಹೇಳಿಕೊಳ್ಳಬೇಕಾಯಿತು ಎಂದು ನಟ ರವಿಚಂದ್ರನ್ ತುಂಬಾ ವರ್ಷಗಳ ಹಿಂದೆ ಸಿದ್ದರಾಮಯ್ಯ ಮಾಡಿದ್ದ ಸಹಾಯ ನೆನಪಿಸಿಕೊಂಡರು.