ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಮತ್ತೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಖಾಸಗಿ ಕಂಪನಿ ಉದ್ಯೋಗಿ ರವೀಂದ್ರ ಎಂಬಾತನ ವಿರುದ್ಧ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್.ಟಿ ನಗರ ಸಮೀಪದ ಗಂಗಾ ನಗರ ನಿವಾಸಿ ರವೀಂದ್ರ ನಾಯಕ್ ವೈಟ್‌ಫೀಲ್ಡ್‌ನಲ್ಲಿರುವ ಎಚ್‌ಪಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಈತನ ವಿರುದ್ಧ ವೈಟ್‌ಫೀಲ್ಡ್‌ನ ಐಟಿಪಿಎಲ್‌ನ ಎಸ್‌ಎಪಿ ಲ್ಯಾಬ್ಸ್ ಕಂಪನಿಯ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ ಶುಕ್ರವಾರ ದೂರು ದಾಖಲಿಸಿದ್ದಾರೆ. ನ್ಯಾಯ ಕೋರಿ ದೂರಿನ ಪ್ರತಿಯನ್ನು ಗೃಹ ಸಚಿವರು, ನಗರ ಪೊಲೀಸ್ ಆಯುಕ್ತರಿಗೂ ನೀಡಿದ್ದಾರೆ.
ವೈಟ್‌ಫೀಲ್ಡ್‌ನಲ್ಲಿ ಯುವತಿ ಪೇಯಿಂಗ್ ಗೆಸ್ಟ್‌ನಲ್ಲಿ ಆಗಿದ್ದಳು. ಪಿಜಿ ಎದುರು ಇದ್ದ ಎಚ್.ಪಿ ಕಂಪನಿಯ ಉದ್ಯೋಗಿ ರವೀಂದ್ರ ಹಾಗೂ ಯುವತಿ ಸುಮಾರು ಆರೇಳು ವರ್ಷಗಳಿಂದ ಸ್ನೇಹಿತರಾಗಿದ್ದರು. ಇಬ್ಬರ ನಡುವೆ ಪ್ರೀತಿ ಉಂಟಾಗಿತ್ತು. ರವೀಂದ್ರ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಗಂಗಾನಗರದ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. 'ನಂತರ ಪದೇ ಪದೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದಾಗ, ನಾನು ನಿರಾಕರಿಸಿದ್ದೆ. ಆಗ, ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಬೆದರಿಸುತ್ತಿದ್ದ. ಹೀಗಾಗಿ ಬಲವಂತಕ್ಕೆ ಆತನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದೆ. ಈ ನಡುವೆ ತಂದೆ-ತಾಯಿಯ ಜೀವಕ್ಕೆ ತೊಂದರೆ ಕೊಡುವುದಾಗಿ ಬೆದರಿಸುತ್ತಿದ್ದ. ಮದುವೆ ಬಗ್ಗೆ ಕೇಳಿದಾಗ ಕೆಲವು ವಾರ, ತಿಂಗಳು ಬಿಟ್ಟು ಮದುವೆಯಾಗೋಣ ಎನ್ನುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಿದ್ದಾಳೆ.
ಆದರೆ, ಸೆ.7 ರಂದು ರವೀಂದ್ರ ನನಗೆ ತಿಳಿಸದೆ ಮತ್ತೊಬ್ಬಳ ಜತೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ತಂದೆ ತಾಯಿ ತೋರಿಸಿದ ಯುವತಿಯನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದ. ಹೀಗಾಗಿ ನನ್ನ ಮೇಲೆ ಅತ್ಯಾಚಾರ ಎಸಗಿ ಮತ್ತೊಬ್ಬಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ರವೀಂದ್ರ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಿ ಎಂದು ಯುವತಿ ದೂರಿನಲ್ಲಿ ಕೋರಿದ್ದಾರೆ.