ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಪದವಿ ನನ್ನ 'ಪರಮ' ಅಧಿಕಾರ

ತಾವು ಉಪ ಮುಖ್ಯಮಂತ್ರಿ ಅಥವಾ ಸಚಿವ ಸ್ಥಾನದ ಆಕಾಂಕ್ಷಿಯೆಂಬುದನ್ನು ಕೆಪಿಸಿಸಿ...

Mainashree
Updated On : 15 Sept 2014, 10:16 am

ಬೆಂಗಳೂರು: ತಾವು ಉಪ ಮುಖ್ಯಮಂತ್ರಿ ಅಥವಾ ಸಚಿವ ಸ್ಥಾನದ ಆಕಾಂಕ್ಷಿಯೆಂಬುದನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಮತ್ತೊಮ್ಮೆ ಬಲವಾಗಿ ಪ್ರತಿಪಾದಿಸಿದ್ದಾರೆ. ಈ ಮೂಲಕ ರಾಜ್ಯ ಸಂಪುಟ ಕಸರತ್ತಿನ ವಿಚಾರವನ್ನು ಮತ್ತೊಮ್ಮೆ ಜೀವಂತವಾಗಿಸುವ ಪ್ರಯತ್ನವನ್ನು ಅವರು ಮಾಡಿದ್ದಾರೆ.

ರಾಜ್ಯದ ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ನನ್ನ ಪಾಲಿದೆ. ಇದನ್ನು ಮತ್ತೆ ನಾನು ಒತ್ತಿ-ಒತ್ತಿ ಹೇಳುತ್ತಿದ್ದೇನೆ. ಇದು ವಾಸ್ತವ ಎಂದು ಪರಮೇಶ್ವರ್ ತುಮಕೂರಿನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ನನ್ನ ಈ ಹೇಳಿಕೆಯಲ್ಲಿ ಯಾವುದೇ ಗೊಂದಲವಿಲ್ಲ. ನಾನು ಮಂತ್ರಿಯಾಗಿದ್ದರೆ ಸಮುದಾಯದ ಸೇವೆ ಮಾಡುವ ಸೌಭಾಗ್ಯ ದೊರಕುತ್ತಿತ್ತು. ಇಂದು ನಮ್ಮ ಸಮುದಾಯದ ಬಗ್ಗೆ ಮಾತನಾಡುವ ಪರಿಸ್ಥಿತಿ ಬಂದಿದೆ. ದಿ. ಬಸವಲಿಂಗಪ್ಪ ರಾಜ್ಯದಲ್ಲಿ ದಲಿತ ಸಮುದಾಯದ ಉತ್ತಮ ರಾಜಕಾರಣಿಯಾಗಿ ಕಾರ್ಯನಿರ್ವಹಿಸಿದ್ದರು. ಆದರೆ, ರಾಜಕೀಯ ಉನ್ನತ ಹುದ್ದೆಗಳಿಂದ ವಂಚಿತರಾದರು. ಅದೇ ರೀತಿಯ ಮತ್ತೊಬ್ಬ ರಾಜಕಾರಣಿ ಎಂದರೆ ಕೆ.ಎಚ್ ರಂಗನಾಥ್ ಅವರು ಕೂಡ ಪ್ರಾಮಾಣಿಕ, ದಕ್ಷರಾಗಿದ್ದರು. ಅವರಿಗೂ ಉನ್ನತ ಹುದ್ದೆ ದೊರಕಲಿಲ್ಲ. ಇನ್ನೊಬ್ಬ ದಲಿತ ರಾಜಕಾರಣಿ ಬಿ.ರಾಚಯ್ಯ ಅವರೂ ಹಾಗೇ ಉಳಿದರು. ಒಟ್ಟಾರೆ ಸಮರ್ಥ ದಲಿತ ರಾಜಕಾರಣಿಗಳಿಗೆ ರಾಜ್ಯದಲ್ಲಿ ಉನ್ನತ ಹುದ್ದೆ ದೊರಕಲಿಲ್ಲ. ಈ ವಿಚಾರ ನಮ್ಮ ಸಮುದಾಯದ ರಾಜದಕಾರಣಿಗಳಿಗೆ,  ಜನತೆಗೆ ಗೊತ್ತಿದೆ. ಆದರೂ ಹೇಳುತ್ತಿದ್ದೇನೆ. ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಎಂ ವಿಚೇಚನೆಗೆ: ಹೀಗಿದ್ದರೂ ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಅಸಮರ್ಥ, ಕ್ರಿಮಿನಲ್ ಹಿನ್ನೆಲೆಯುಳ್ಳ ಸಚಿವರನ್ನು ಕೈಬಿಡುವುದರ ಬಗ್ಗೆ ಅವರ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಈ ತಿಂಗಳಲ್ಲಿ ನಿಗಮ, ಮಂಡಳಿ ನೇಮಕ ಪೂರ್ಣಗೊಳಿಸಲಾಗುವುದು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಹೈಕಮಾಂಡ್‌ಗೆ ಪತ್ರ ಬರೆದಿರುವುದು ನನಗೆ ಗೊತ್ತಿಲ್ಲ. ಕೆಲವೇ ದಿನಗಳಲ್ಲಿ ಈ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ ಎಂದರು.

ಚರ್ಚೆ ಇಂದು: ಏತನ್ಮಧ್ಯೆ, ಸಚಿವ ಸಂಪುಟ ಹಾಗೂ ನಿಗಮ ಮಂಡಳಿಗಳು ನೇಮಕ ವಿಚಾರದಲ್ಲಿ ಸಾಕಷ್ಟು ಗೊಂದಲ ನಿರ್ಮಾಣವಾಗಿದ್ದು, ಇದಕ್ಕೆ ತೇಪೆ ಹಚ್ಚುವ ಹೇಳಿಕೆಗಳನ್ನು ರಾಜ್ಯ ಕಾಂಗ್ರೆಸ್ ನಾಯಕರು ನೀಡಿದ್ದಾರೆ.

ನಿಗಮ-ಮಂಡಲಿ ನೇಮಕ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ ಜೊತೆ ಸೆ.15ರಂದು ಚರ್ಚಿಸಲಾಗುವುದು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೆ.50ರಷ್ಟು ಸ್ಥಾನ ಮೀಸಲು ನೀಡಲು ರಾಜ್ಯ ಸರ್ಕಾರ ಬದ್ಧ. ಅದೇ ರೀತಿ ನಿಗಮ-ಮಂಡಳಿಗಳ ನೇಮಕದಲ್ಲೂ ಹಿರಿಯರು, ಯುವಕರು, ಮಹಿಳೆಯರಿಗೆ ಆದ್ಯತೆ ನೀಡಲಾಗುವುದು ಎಂದು ಸಿದ್ದರಾಮಯ್ಯ ಮೈಸೂರಿನಲ್ಲಿ ತಿಳಿಸಿದ್ದಾರೆ.

ಸಂಪುಟ ಪುನಾರಚನೆ ಕುರಿತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನಾನು ಯಾವುದೇ ಪತ್ರ ಬರೆದಿಲ್ಲ. ಇದು ಅಪ್ಪಟ ಸುಳ್ಳು. ಈ ರೀತಿಯ ವರದಿಗಳು ಹೇಗೆ ಉದ್ಭವಾಗುತ್ತವೋ ಗೋತ್ತಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement