ಮಹಿಳಾ ಕಾರ್ಮಿಕರಿಗೆ ವಿಶೇಷ ಬಸ್
ಇನ್ನು ಕೆಲವೇ ದಿನಗಳಲ್ಲಿ ಕಾರ್ಮಿಕ ಮಹಿಳಾಮಣಿಯರಿಗಾಗಿ ವಿಶೇಷ...
-ಅತ್ಯಾಚಾರ, ದೌರ್ಜನ್ಯ ತಡೆಗೆ ಕಾರ್ಮಿಕ, ಸಾರಿಗೆ ಇಲಾಖೆ ಜಂಟಿ ಯೋಜನೆ
ಬೆಂಗಳೂರು: ಕಾರ್ಮಿಕ ಮಹಿಳೆಯರಿಗಾಗಿಯೇ ಬರಲಿವೆ ವಿಶೇಷ ಬಸ್ಗಳು...!
ಹೌದು, ಇನ್ನು ಕೆಲವೇ ದಿನಗಳಲ್ಲಿ ಕಾರ್ಮಿಕ ಮಹಿಳಾಮಣಿಯರಿಗಾಗಿ ವಿಶೇಷ ಬಸ್ಗಳು ನಗರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಸಂಚರಿಸಲಿವೆ.
ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ, ದೌರ್ಜನ್ಯ ಪ್ರಕರಣ ತಡೆಗೆ ಕಾರ್ಮಿಕ ಹಾಗೂ ಸಾರಿಗೆ ಇಲಾಖೆ ಜಂಟಿಯಾಗಿ ಇಂತಹದೊಂದು ನೂತನ ಯೋಜನೆಯನ್ನು ಜಾರಿಗೆ ತರುತ್ತಿವೆ.
ಇನ್ನು ಒಂದೆರಡು ತಿಂಗಳಲ್ಲಿ ಈ ಬಸ್ಗಳು ರಸ್ತೆಗಿಳಿಯುವ ನಿರೀಕ್ಷೆಯಿದೆ.
ವಿಶೇಷವಾಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ಈ ಯೋಜನೆ ಜಾರಿಗೆ ತರಲಾಗುತ್ತಿದೆ.
ಬಸ್ಗಳಲ್ಲಿ ಕಾರ್ಖಾನೆ ಸಿಬ್ಬಂದಿ ಮಾತ್ರವಲ್ಲದೆ ಕಾರ್ಖಾನೆಗಳ ಸುತ್ತಮುತ್ತ ಇರುವ ಬೇರೆ ಕಂಪನಿ, ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರೂ ಸಂಚರಿಸಬಹುದು ಎಂದು ಸಾರಿಗೆ ಮತ್ತು ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಮಮೂರ್ತಿ ತಿಳಿಸಿದರು.
ಸಾರಿಗೆ ಇಲಾಖೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನಲೆಯಲ್ಲಿ ಈ ಯೋಜನೆ ಆರಂಭಿಸಲು ತೀರ್ಮಾನಿಸಿದ್ದು, ಅಗತ್ಯಬಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.
ಈ ಹಿಂದೆ ಬಿಎಂಟಿಸಿಯಿಂದ ಮಹಿಳೆಯರಿಗಾಗಿ ಪಿಂಕ್ ಬಸ್ ಬಿಡಲಾಗಿತ್ತು. ಆದರೆ, ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗದ ಕಾರಣ ಅದನ್ನು ಸ್ಥಗಿತಗೊಳಿಸಲಾಗಿತ್ತು.
ಸಮೀಕ್ಷೆ ಆರಂಭ
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 733 ಕಾರ್ಖಾನೆಗಳಿದ್ದು, 2.54 ಲಕ್ಷ ಮಹಿಳಾ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಅವರು ಎಲ್ಲಿಂದ ಬರುತ್ತಾರೆ, ಯಾವ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಾರೆ ಎಂಬ ಮಾಹಿತಿ ಇಲ್ಲ.
ಹಾಗಾಗಿ ಈ ಬಗ್ಗೆ ಕಾರ್ಮಿಕರು, ಕಾರ್ಖಾನೆ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಲಾಗಿದೆ.
ಬಿಎಂಟಿಸಿ, ಕೆಎಸ್ಆರ್ಟಿಸಿ, ಸಾರಿಗೆ ಇಲಾಖೆ, ಕಾರ್ಮಿಕ ಇಲಾಖೆ ಸೇರಿ ಜಂಟಿಯಾಗಿ ಸರ್ವೆ ಕಾರ್ಯ ಕೈಗೆತ್ತಿಕೊಂಡಿವೆ.
ತಿಂಗಳಲ್ಲಿ ಈ ಸರ್ವೆ ಕೆಲಸ ಮುಕ್ತಾಯವಾಗಲಿದ್ದು, ನಂತರ ಯಾವ ಸ್ಥಳಗಳಿಗೆ, ಯಾವ ಸಮಯಕ್ಕೆ ಎಷ್ಟು ಬಸ್ ಬಿಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಆದರೆ ಈ ಬಸ್ಗಳಲ್ಲಿ ಬೇರೆ ಬಸ್ಗಳಿಗಿಂತ ದರ ಕಡಿಮೆ ಮಾಡಬೇಕೇ ಅಥವಾ ಬೇಡವೇ ಎಂಬದನ್ನು ಇನ್ನೂ ನಿರ್ಧರಿಸಿಲ್ಲ. ಪರಿಸ್ಥಿತಿ ಅವಲೋಕಿಸಿ ನಂತರ ತೀರ್ಮಾನಿಸಲಾಗುತ್ತದೆ ಎಂದು ತಿಳಿಸಿದರು. ತೆರಿಗೆ ಸಂಗ್ರಹದಲ್ಲಿ ಸಾರಿಗೆ ಇಲಾಖೆ ಮುಂದಿದ್ದು, ಶೇ.96ರಷ್ಟು ಸಂಗ್ರಹವಾಗಿದೆ.