ಇನ್ನೆಷ್ಟು ದಿನ ವೇಶ್ಯೆ ಆಗಿರ್ಬೇಕು?
ವೇಶ್ಯಾವೃತ್ತಿಗೆ ಮಾನ್ಯತೆ ನೀಡಿ ಎಂದು ಬೆಂಬಲಿಸುತ್ತಿರುವವರು ಮೊದಲು ಆ...
ಬೆಂಗಳೂರು: ವೇಶ್ಯಾವೃತ್ತಿಗೆ ಮಾನ್ಯತೆ ನೀಡಿ ಎಂದು ಬೆಂಬಲಿಸುತ್ತಿರುವವರು ಮೊದಲು ಆ ಸ್ಥಾನದಲ್ಲಿ ತಮ್ಮ ಮಗಳು, ಪತ್ನಿ ಹಾಗೂ ಅಕ್ಕ-ತಂಗಿಯರನ್ನು ಕಲ್ಪಿಸಿಕೊಳ್ಳಲಿ. ವೇಶ್ಯಾ ವೃತ್ತಿಯನ್ನು ಕಾನೂನು ಬದ್ಧ ಮಾಡಿದ್ದಲ್ಲಿ ಬೀದಿಗೊಂದು ಸರಾಯಿ ಅಂಗಡಿ ತೆರೆಯಲು ಅನುಮತಿ ನೀಡಿದಂತೆ. ಕದ್ದುಮುಚ್ಚಿ ಮಾಡುತ್ತಿದ್ದ ಅನೈತಿಕ ಚಟುವಟಿಕೆಯನ್ನು ಕಾನೂನಿ ಚೌಕಟ್ಟಿಗೆ ಒಳಪಡಿಸುವುದು ಎಷ್ಟು ಸರಿ? ಎಷ್ಟು ದಿನ ಮಹಿಳೆಯನ್ನು ವೇಶ್ಯೆಯಾಗಿ ನೋಡಲಿಚ್ಛಿಸುತ್ತೀರಿ ಎಂದು ಮಹಿಳಾ ಆಯೋಗ ಅಧ್ಯಕ್ಷೆ ಮಂಜುಳಾ ಮಾನಸ ತರಾಟೆಗೆ ತೆಗೆದುಕೊಂಡರು.
ಸೋಮವಾರ ಸ್ವಾಭಿಮಾನಿ ಕರ್ನಾಟಕ ವೇದಿಕೆ ಮತ್ತು ಕರ್ನಾಟಕ ಲೇಖಕಿಯರ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಹಿಳೆಯರ ಮೇಲೆ ದೌರ್ಜನ್ಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಕಾನೂನಿಗೆ ವಿರೋಧ: ವೇಶ್ಯಾವಾಟಿಕೆ ಕಾನೂನು ಬದ್ಧಗೊಳಿಸುವುದನ್ನು ಆಯೋಗ ವಿರೋಧಿಸುತ್ತದೆ. ವೇಶ್ಯಾವಾಟಿಕೆಗೆ ಮಾನ್ಯತೆ ನೀಡುವ ನಿಟ್ಟಿನಲ್ಲಿ ಪರಿಶೀಲಿಸಲು ಸಮಿತಿ ರಚಿಸಲು ಮುಂದಾಗಿರುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು. ಹಿರಿಯ ಸಾಹಿತಿ ಡಾ.ಕೆ ಮರಳಸಿದ್ದಪ್ಪ ಮಾತನಾಡಿ, ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಿಸುವ ಮಾದರಿಯಲ್ಲಿ ಮೊದಲು ಪೊಲೀಸ್ ಇಲಾಖೆಯಲ್ಲಿ 1/3 ಮಹಿಳೆಯರು ನೇಮಕಗೊಳ್ಳಬೇಕು. ಕೂಲಿ, ಗಾರ್ಮೆಂಟ್ ಮತ್ತು ಕಟ್ಟಡ ನಿರ್ಮಾಣದಲ್ಲಿರುವ ಮಹಿಳೆಯರ ಸಮೀಕ್ಷೆ ನಡೆಸಿ ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು. ಆಪ್ ಪಕ್ಷದ ಮುಖಂಡ ರವಿಕೃಷ್ಣಾರೆಡ್ಡಿ, ಲೇಖಕಿ ಬಿ.ನಾರಾಯಣಮ್ಮ ಉಪಸ್ಥಿತರಿದ್ದರು.