ಮನೆಮಂದಿ ಅಂದರ್ ಬಾಹರ್ ಆಡಿದರೆ ಜೂಜಲ್ಲ: ಹೈಕೋರ್ಟ್
ಮನೆಯ ಆವರಣದಲ್ಲಿ ಮನೆಮಂದಿ ಕುಳಿತು...
ಬೆಂಗಳೂರು: ಮನೆಯ ಆವರಣದಲ್ಲಿ ಮನೆಮಂದಿ ಕುಳಿತು ಅಂದರ್ ಬಾಹರ್ ಆಟವಾಡಿದರೆ ಅದನ್ನು ಜೂಜಾಟ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸಾಗರ ತಾಲೂಕಿನ ಕೋಡಿ ಲಿಂಗದಹಳ್ಳಿಯ ವಿಶ್ವನಾಥ್ ಹಾಗೂ ಇತರೆ ಮೂವರು ಧಾರ್ಮಿಕ ಸಮಾರಂಭದ ವೇಳೆ ಮನೆ ಆವರಣದಲ್ಲಿ ಅಂದರ್ ಬಾಹರ್ ಆಡುತ್ತಿದ್ದರು. ಇದನ್ನು ಕಂಡ ಸಾಗರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಪೊಲೀಸರು ನಾಲ್ವರನ್ನು ಬಂಧಿಸಿ ಜೂಜಾಟ ಪ್ರಕರಣ ದಾಖಲಿಸಿದ್ದರು. ಅದನ್ನು ರದ್ದುಪಡಿಸುವಂತೆ ಕೋರಿ ವಿಶ್ವನಾಥ್ ಹಾಗೂ ಇತರೆ ಮೂವರು ಹೈಕೋರ್ಟ್ ಮೆಟ್ಟಿಲೇರಿದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೆ.ಎನ್ ಫಣೀಂದ್ರ ಅವರ ಪೀಠ, ಮನೆಯವರೆಲ್ಲ ಒಟ್ಟುಗೂಡಿ ಅಂದರ್ ಬಾಹರ್ ಆಡಿದರೆ ಜೂಜಾಟವಲ್ಲ. ಈ ಕುರಿತು ಹೈಕೋರ್ಟ್ 1971 ಮತ್ತು 1977ರಲ್ಲಿ ತೀರ್ಪು ನೀಡಿದೆ.
ಪೊಲೀಸರು ತಮ್ಮಷ್ಟಕ್ಕೆ ತಾವು ಕಲ್ಪನೆ ಮಾಡಿಕೊಂಡು ಈ ರೀತಿ ಕಾನೂನನ್ನು ದುರುಪಯೋಗ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ. ಕರ್ನಾಟಕ ಪೊಲೀಸ್ ಕಾಯ್ದೆ 79 ಹಾಗೂ 80ರ ಪ್ರಕಾರ ಜೂಜಿಗಾಗಿ ಮನೆ ಬಾಡಿಗೆ ಹಿಡಿದು ಅಥವಾ ಪ್ರತ್ಯೇಕ ಸ್ಥಳದಲ್ಲಿ ಹಣ ಪಣಕ್ಕೆ ಒಡ್ಡಿ ಆಡಿದರೆ ಜೂಜೆಂದು ಪರಿಗಣಿಸಬಹುದು ಎಂದು ಏಕಸದಸ್ಯ ಪೀಠ ಅಭಿಪ್ರಾಯಪಟ್ಟು ದೂರು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದೆ.