ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ನಾಳೆ ಜಯಾ ಪ್ರಕರಣದ ತೀರ್ಪು

ತಮಿಳುನಾಡು ಸಿಎಂ ಜಯಲಲಿತಾ...

Rashmi Kasaragodu
Updated On : 26 Sept 2014, 8:52 am

ಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಗಿದಿದ್ದು, ನಾಳೆ ಸಿಬಿಐ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಲಿದೆ.

ಹೀಗಾಗಿ ನಾಳೆ ಪರಪ್ಪನ ಅಗ್ರಹಾರದಲ್ಲಿರುವ ವಿಶೇಷ ಕೋರ್ಟ್‌ಗೆ ಸ್ವತಃ ಮುಖ್ಯಮಂತ್ರಿ ಜಯಲಲಿತಾ ಅವರು ಖುದ್ದು ಹಾಜರಾಗಲಿದ್ದಾರೆ. ತೀವ್ರ ಕುತೂಹಲ ಮೂಡಿಸಿರುವ ತೀರ್ಪು ಜಯಲಲಿತಾ ರಾಜಕೀಯ ಭವಿಷ್ಯವನ್ನೇ ನಿರ್ಧರಿಸಲಿದೆ.

ನಾಳೆ ಬೆಳಗ್ಗೆ 8.38ಕ್ಕೆ ಚೆನ್ನೈನಿಂದ ಹೊರಟು ವಿಶೇಷ ವಿಮಾನದಲ್ಲಿ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಸುಮಾರು 9.30ಕ್ಕೆ ಆಗಮಿಸಲಿದ್ದಾರೆ.

ನಂತರ ಎಚ್‌ಎಎಲ್‌ನಿಂದ ವಿಶೇಷ ವಿಮಾನದಲ್ಲಿ ಹೊರಟು ಪರಪ್ಪನ ಅಗ್ರಹಾರದ ಕೋರ್ಟ್ ಹಿಂಭಾಗದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್‌ಗೆ 10 ಗಂಟೆಗೆ ಬಂದಿಳಿಯಲಿದ್ದಾರೆ. ಸ್ವಲ್ಪ ಸಮಯ ವಿಶ್ರಾಂತಿ ಪಡೆದ ನಂತರ 11 ಗಂಟೆಗೆ ಸಿಬಿಐ ವಿಶೇಷ ಕೋರ್ಟ್‌ಗೆ ಆಗಮಿಸಲಿದ್ದಾರೆ.

ಆದಾಯಕ್ಕೀ ಮೀರಿ ಆಸ್ತಿ ಸಂಪಾದನೆ ಪ್ರಕರಣದ ತೀರ್ಪು ಸೆ.27ರಂದು ವಿಶೇಷ ನ್ಯಾಯಾಲಯದಲ್ಲಿರುವುದರಿಂದ ಹೊಸೂರು ರಸ್ತೆ, ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಬಂದೋಬಸ್ತ್  ಕೈಗೊಳ್ಳಲಾಗಿದೆ.

ಗುರುವಾರ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಭದ್ರತೆ ಪರಿಶೀಲಿಸಿದರು. ಶುಕ್ರವಾರ ಸಂಜೆ ನ್ಯಾಯಾಲಯದ ಸುತ್ತಮುತ್ತ ಸರ್ಪಗಾವಲು ಇರಲಿದೆ. ಹೆಚ್ಚುವರಿಯಾಗಿ ಕೆಎಸ್‌ಆರ್‌ಪಿ, ಕ್ಷಿಪ್ರ ಕಾರ್ಯಪಡೆ ತಂಡಗಳು, ಮಫ್ತಿ ಪೊಲೀಸರು ಸೇಪಿ ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಟ್ರಾಫಿಕ್ ನಿಯಂತ್ರಣಕ್ಕೆ 100 ಸಂಚಾರ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ತಂಡ ಈಗಾಗಲೇ ಚೆನ್ನೈಗೆ ತೆರಳಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಂಭವನೀಯತೆಯ ಮಾಹಿತಿ ಪಡೆದುಕೊಂಡಿದ್ದಾರೆ.
ಸಾರ್ವಜನಿಕರು, ಮಾಧ್ಯಮ ಸೇರಿದಂತೆ ಎಲ್ಲರನ್ನು ತೀರ್ಪು ಪ್ರಕಟವಾಗಲಿರುವ ವಿಶೇಷ ನ್ಯಾಯಾಲಯದಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿ ತಡೆದು ನಿಲ್ಲಿಸಲಾಗುತ್ತದೆ.

10 ಸಾವಿರ ನಿರೀಕ್ಷೆ: ಕರ್ನಾಟಕ ಗಡಿಭಾಗದಲ್ಲಿರುವ ತಮಿಳುನಾಡಿನ ವಿಧಾನಸಭಾ ಕ್ಷೇತ್ರಗಳಲ್ಲಿರುವ ಎಐಎಡಿಎಂಕೆ ಪಕ್ಷದ ಶಾಸಕರು, ಮುಖಂಡರು ಸೇರಿದಂತೆ ಹಲವು ರಾಜಕಾರಣಿಗಳು ಹಾಗು ಬೆಂಬಲಿಗರು ಬರುವ ನಿರೀಕ್ಷೆ ಇದೆ. ಇನ್ನು ತಮಿಳಿಗರು ಪ್ರಾಬಲ್ಯವಿರುವ ಬೆಂಗಳೂರಿನ ಹಲವು ಪ್ರದೇಶಗಳ ಸಣ್ಣಪುಟ್ಟ ರಾಜಕಾರಣಿಗಳು ಹಾಗೂ ಬೆಂಬಲಿಗರೂ ಪರಪ್ಪನ ಅಗ್ರಹಾರ ಬಳಿ ಸೇರಲಿದ್ದಾರೆ.
ಎಐಎಡಿಎಂಕೆ ಪಕ್ಷದ ಎದುರಾಳಿ ಪಕ್ಷ ಡಿಎಂಕೆಯ ಸಾವಿರಾರು ಬೆಂಬಲಿಗರು ಕೂಡಾ ಬೆಂಗಳೂರಿಗೆ ಬರುವ ನಿರೀಕ್ಷೆ ಇದೆ. ಈಗಾಗಲೇ ನಗರದ ಲಾಡ್ಜ್‌ಗಳಲ್ಲಿ ನೂರಾರು ಕೊಠಡಿಗಳು ತಮಿಳುನಾಡಿನ ರಾಜಕೀಯ ಮುಖಂಡರಿಂದ ಬುಕ್ ಆಗಿವೆ. ಅವರು ಶನಿವಾರ ಬೆಳಗ್ಗಿನ ವೇಳೆಗೆ ಪರಪ್ಪನ ಅಗ್ರಹಾರ ಬಳಿ ಜಮಾಯಿಸಲಿದ್ದಾರೆ. ಹೀಗಾಗಿ ಪ್ರಕರಣದ ತೀವ್ರ ಕುತೂಹಲ ಕೆರಳಿಸಿದೆ. ತೀರ್ಪು ಜಯಲಲಿತಾ ಅವರಿಗೆ ವ್ಯತರಿಕ್ತವಾಗಿ ಬಂದಲ್ಲಿ ಸಂಭವನೀಯ ಅಹಿತಕರ ಘಟನೆಗಳನ್ನು ಎದುರಿಸಲು, ಕ್ಷಿಪ್ರ ಕಾರ್ಯಪಡೆ,ಮೀಸಲು ಪೊಲೀಸ್ ಪಡೆ ಹಾಗೂ ಸಿಎಆರ್ ಪೊಲೀಸರನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement