ಶ್, ವಾಹನ ಸದ್ದು ಮಾಡಿದ್ರೆ ದಂಡ ಬೀಳುತ್ತೆ!
ನಿಮ್ಮ ವಾಹನದ ಸೈಲೆನ್ಸರ್‌ನಿಂದ ಕರ್ಕಶ...
ಬೆಂಗಳೂರು: ನಿಮ್ಮ ವಾಹನದ ಸೈಲೆನ್ಸರ್‌ನಿಂದ ಕರ್ಕಶ ಶಬ್ದ ಬರುತ್ತಿದೆಯೇ? ನಿಮ್ಮ ವಾಹನ ಹಾರ್ನ್ ಕಿರಿಕಿರಿ ಉಂಟು ಮಾಡುವಂತಿದೆಯೆ? ಹಾಗಿದ್ದರೆ ಆದಷ್ಟು ಬೇಗ ಅದನ್ನು ಸರಿಪಡಿಸಿಕೊಳ್ಳಿ. ಏಕೆಂದರೆ ಶಬ್ಧದ ಪ್ರಮಾಣ ಪತ್ತೆ ಹಚ್ಚುವ ಅತ್ಯಾಧುನಿಕ ಸಾಧನ ಶೀಗ್ರವೇ ಪೊಲೀಸರ ಕೈ ಸೇರಲಿದೆ.
ನಿಮ್ಮ ವಾಹನ ಹೊರಸೂಸುವ ಶಬ್ದ ನಿಗದಿತ ಮಟ್ಟಕ್ಕಿಂತ ಹೆಚ್ಚಿದ್ದರೆ ರು.1,000 ದಂಡ ತೆರಬೇಕಾಗುತ್ತದೆ..!
ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನು ಪತ್ತೆ ಮಾಡಿ ದಂಡ ವಿಧಿಸುವ ಪೊಲೀಸರು ಮುಂದಿನ ದಿನಗಳಲ್ಲಿ ಕರ್ಕಶ ಶಬ್ದ ಹೊರಸೂಸುವ ವಾಹನಗಳನ್ನು ಈ ಸಾಧನದಿಂದ ಪತ್ತೆ ಮಾಡಿ ಸ್ಥಳದಲ್ಲೇ ದಂಡ ವಿಧಿಸಲಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಜಂಟಿ ಮಾತುಕತೆ ನಡೆಸಿದ್ದು, ತಿಂಗಳೊಳಗೆ 100 ಶಬ್ಧ ಮಾಪನಗಳು ಪೊಲೀಸರ ಕೈ ಸೇರಲಿವೆ. ಈ ಶಬ್ದ ಮಾಪನವೊಂದಕ್ಕೆ ಸುಮಾರು ರು.1 ಲಕ್ಷ ವೆಚ್ಚ ತಗುಲಲಿದೆ.
ವಾಹನಗಳಿಂದ ಹೊರಸೂಸುವ ವಿವಿಧ ರೀತಿ ಶಬ್ದ(ಶ್ರಿಲ್ ಹಾರ್ನ್), ಎಂಜಿನ್‌ನಿಂದ ಬರುವ ಕರ್ಕಶ ಶಬ್ದವನ್ನು ಪತ್ತೆ ಮಾಡುವ ಸಾಧನ ಇದು.
ನಗರದಲ್ಲಿ ಕರ್ಕಶ ಶಬ್ದ ಹೊರಸೂಸುವ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಆಟೋಗಳಿಗೆ ಇದರಲ್ಲಿ ಪ್ರಥಮ ಸ್ಥಾನ. ಈ ಹಿನ್ನೆಲೆಯಲ್ಲಿ ಸದ್ಯ 100 ಮಾಪನಗಳನ್ನು ಹೈದ್ರಾಬಾದ್‌ನಿಂದ ಖರೀದಿಸಲಾಗುತ್ತದೆ. ಸರ್ಕಾರದಿಂದ ಅನುಮತಿ ಸಿಕ್ಕ ಬಳಿಕ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಮಾಲಿನ್ಯ ನಿಯಂತ್ರಣಾ ಮಂಡಳಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮಾಪನವಿಲ್ಲದೆ ದಂಡ: ಸದ್ಯ ಪೊಲೀಸ್ ಇಲಾಖೆ ಬಳಿ ವಾಹನದ ಶಬ್ದವನ್ನು ಅಳೆಯುವ ಯಾವ ಮಾಪನವೂ ಇಲ್ಲ. ಅಂತಹ ಕರ್ಕಶ ಶಬ್ದ ಮಾಡುವ ವಾಹನ ಕಂಡುಬಂದಲ್ಲಿ ಪೊಲೀಸರು ದಂಡ ವಿಧಿಸುತ್ತಿದ್ದರು. ಆದರೆ, ಅವರ ಬಳಿ ಶಬ್ದ ಅಳೆಯುವ ಯಾವುದೇ ಮಾಪನ ಇರಲಿಲ್ಲ. ಈಗ ಶಬ್ದವನ್ನು ಅಳೆದು ನಂತರ ದಂಡ ಹಾಕಲಿದ್ದಾರೆ.
ಅನುಮಾನ ಬಂದ ಯಾವುದೇ ವಾಹನವನ್ನು ಪೊಲೀಸರು ತಡೆದು ತಪಾಸಣೆ ಮಾಡಬಹುದು. ಅನುಮಾನ ಬಂದ ವಾಹನವನ್ನು ಪೊಲೀಸರು ತಡೆದು ತಪಾಸಣೆ ಮಾಡಬಹುದು. ಅನುಮಾನ ಬಂದ ವಾಹನವನ್ನು ಚಾಲನೆಯಲ್ಲಿ ಇರಿಸಿ ಸುತ್ತ ನಾಲ್ಕು ಭಾಗದಲ್ಲಿ ಈ ಮಾಪನವನ್ನು 45 ಡಿಗ್ರಿಯಲ್ಲಿ ಹಿಡಿದು ತಪಾಸಣೆ ಮಾಡಲಾಗುತ್ತದೆ.
ಮೋಟಾರು ವಾಹನ ಕಾಯ್ದೆ ಅಡಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ರು.300, ಕಾರುಗಳಿಗೆ ರು.600, ದೊಡ್ಡ ವಾಹನಗಳಿಗೆ ರು.800 ದಂಡ ಹಾಕಬೇಕು. ಆದರೆ, ಆ ಕೆಲಸವಾಗುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಮಾಪನದ ಮೂಲಕ ದಂಡ ವಿಧಿಸುವ ಕೆಲಸ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ ಎನ್ನುತ್ತಾರೆ ಅಧಿಕಾರಿಗಳು.
ದಂಡ: ಕರ್ಕಶ ಧ್ವನಿ ಹೊಂದಿದ ಬಿಎಂಟಿಸಿ ಬಸ್‌ಗಳ ವಿರುದ್ಧ 78 ಕೇಸ್ ದಾಖಲಾಗಿದ್ದು ಇತರೆ ವಾಹನಗಳಿಂದ 42,671 ಕೇಸ್ ದಾಖಲಾಗಿದೆ. ಶಬ್ಧ ರಹಿತ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿದ ಬಸ್‌ಗಳ ಮೇಲೆ 2012 ರಿಂದ ಈವರೆಗೂ 2,848 ಕೇಸ್ ದಾಖಲಾಗಿದ್ದು ಮೋಜಿಗಾಗಿ ವಾಹನದ ಸೈಲೆನ್ಸರ್‌ಗಳನ್ನು ಮಾರ್ಪಡಿಸಿ ತೊಂದರೆ ನೀಡಿದ ವಾಹನಗಳ ಮೇಲೆ 2012ರಿಂದ ಕಳೆದ ಅ.31ರವರೆಗೂ 28,562 ಕೇಸ್ ದಾಖಲಿಸಿದ್ದಾರೆ.
ಕರ್ಕಶ ಶಬ್ದ ಮಾಡುವ 2 ಸಾವಿರಕ್ಕೂ ಅಧಿಕ ಆಟೋ ಪತ್ತೆಯಾಗಿವೆ. ಇಂತಹ ಪ್ರಕರಣಗಳಿಂದ ಸುಮಾರು ರು.94 ಲಕ್ಷ ದಂಡ ರೂಪದಲ್ಲಿ ವಸೂಲಾಗಿದೆ.
ಶಾಂತ ತಮ್ಮಯ್ಯ