ಕುದ್ರೋಳಿ ಕ್ಷೇತ್ರಕ್ಕೆ ದಲಿತ, ವಿಧವೆ ಅರ್ಚಕಿಯರು
ಮಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಇಬ್ಬರು ವಿಧವೆ ಮಹಿಳೆಯರಿಗೆ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಅರ್ಚಕಿಯಾಗಿ ನೇಮಿಸುವ ಮೂಲಕ ಕ್ರಾಂತಿಗೆ ನಾಂದಿ ಹಾಡಲಾಗಿದೆ. ಚಿಲಿಂಬಿಯ ಲಕ್ಷ್ಮಿ ಮತ್ತು ರಾಣಿಪುರದ ಚಂದ್ರಾವತಿ ಎಂಬವರು ನೇಮಕವಾದ ಅರ್ಚಕಿಯರು.
ಸೋಮವಾರ ಕುದ್ರೋಳಿ ಕ್ಷೇತ್ರದಲ್ಲಿ ಕ್ಷೇತ್ರದ ಅಭಿವೃದ್ಧಿ ರೂವಾರಿ, ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಇಬ್ಬರು ದಲಿತ ವಿಧವೆ ಅರ್ಚಕಿಯರನ್ನು ಬಿರುದಾವಲಿಗಳ ಸಹಿತವಾಗಿ ಸ್ವಾಗತಿಸಿದರು.
ಸರೋವರದಲ್ಲಿ ಶುಚಿರ್ಭೂತರಾಗಿ ಬಂದ ಬಳಿಕ ದೇವರಿಗೆ ಅರ್ಚಕಿಯರು ಮಂಗಳಾರತಿ ಮಾಡಿದ್ದು, ಜನಾರ್ದನ ಪೂಜಾರಿ ಮೊದಲಿಗೆ ಆರತಿ ಸ್ವೀಕರಿಸಿದರು. ಅರ್ಚಕಿಯರು ಭಕ್ತರಿಗೆ ಪ್ರಸಾದವನ್ನು ನೀಡಿದರು.
ಮಾತೃದೇವೋಭವ ಎಂಬ ಶ್ರೇಷ್ಠ ಮಾತಿನಂತೆ ನಾವು ಮಹಿಳೆಯರಿಗೆ ಅಸಮಾನತೆ ಮಾಡಬಾರದು. ಅದರಲ್ಲಿಯೂ ವಿಧವೆಯರಿಗೆ ತಾರತಮ್ಯ ಮಾಡಬಾರದು. ಮಹಿಳೆಯರೂ ಪುರುಷರ ಸಮಾನ. ಅವರೂ ಕೂಡಾ ಮಾನವರೇ. ಆದ್ದರಿಂದ ವ್ಯತ್ಯಾಸ ಏಕೆ. ನಾವು ಮಹಿಳೆಯರನ್ನು ತಾಯಿಯಂತೆ ಗೌರವಿಸಬೇಕು. ಅವರಿಂದ ಧಾರ್ಮಿಕ, ಶಾಸ್ತ್ರೀಯ ಆಚರಣೆಗಳನ್ನು ಮಾಡಿಸಬೇಕು. ದೇವರ ಎದುರು ಎಲ್ಲರೂ ಸಮಾನರೂ ಎಂದು ಗುರು ಬ್ರಹ್ಮಶ್ರೀ ನಾರಾಯಣ ಗುರುಗಳು ಹೇಳಿದ್ದಾರೆ. ಸಮಾಜದ ಎಲ್ಲರೂ ಈ ಹಕ್ಕನ್ನು ಹೊಂದಿದ್ದಾರೆ ಎಂದು ಪೂಜಾರಿ ಹೇಳಿದರು.
ಕುದ್ರೋಳಿ ಕ್ಷೇತ್ರಕ್ಕೆ ದಲಿತ ಅರ್ಚಕರನ್ನು ಪೂಜೆಗೆ ನೇಮಿಸುವುದಾಗಿ ಜನಾರ್ದನ ಪೂಜಾರಿ ಕನ್ನಡಪ್ರಭ ಜತೆ ಕಳೆದ ವರ್ಷ ವಿಶೇಷ ಸಂದರ್ಶನದಲ್ಲಿ ಹೇಳಿದ್ದರು. ಇದೀಗ ಅದನ್ನು ಮಾಡಿ ತೋರಿಸಿದ್ದಾರೆ.