ಬಳ್ಳಾರಿ: ಬಳ್ಳಾರಿ ಗ್ರಾಮೀಣ ಕ್ಷೇತ್ರದ ಉಪಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ರು.850 ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಸೋಮವಾರ ಮಾತನಾಡಿ, ನಾನಾ ಇಲಾಖೆಗಳ ಮೂಲಕ ಈ ಪ್ಯಾಕೇಜ್ ಅನ್ನು ಮೂರು ವರ್ಷಗಳ ಒಳಗೆ ಜಾರಿಗೊಳಿಸಲಾಗುವುದು. ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಸಿದ್ಧಪಡಿಸಿರುವ ರು.204 ಕೋಟಿ ಕ್ರಿಯಾ ಯೋಜನೆಯನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
2011ರಲ್ಲಿ ಉಪಚುನಾವಣೆಗೆ ನಾನು ಬಳ್ಳಾರಿಗೆ ಬಂದಾಗ ಚಾಗನೂರು-ಸಿರಿವಾರ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆದಿತ್ತು. ಅದನ್ನು ನಾನು ವಿರೋಧಿಸಿದ್ದು ಸತ್ಯ. ಈಗ ಅಧಿಕಾರಿಗಳು ಸ್ಥಳ ಅಳತೆ ಮಾತ್ರ ಮಾಡುತ್ತಿದ್ದಾರೆ. ವಿಮಾನ ನಿಲ್ದಾಣ ವಿಚಾರವಾಗಿ ಇನ್ನೂ ನಿರ್ಧಾರ ಕೈಗೊಂಡಿಲ್ಲ
-ಸಿದ್ಧರಾಮಯ್ಯ, ಮುಖ್ಯಮಂತ್ರಿ
3 ವರ್ಷಗಳಲ್ಲಿ ಪ್ಯಾಕೇಜ್ ಅನುಷ್ಠಾನ
ರು. 247 ಕೋಟಿ: ಗ್ರಾಮಾಂತರದಲ್ಲಿ 12,399 ಮನೆಗಳ ನಿರ್ಮಾಣಕ್ಕೆ
ರು. 110 ಕೋಟಿ: ನಗರದ ಪ್ರದೇಶಗಳಲ್ಲಿ 5,500 ಮನೆಗಳ ನಿರ್ಮಾಣಕ್ಕೆ
ರು.39 ಕೋಟಿ: ಜಿಲ್ಲಾ ಪಂಚಾಯಿತಿ ಮೂಲಕ ಶೌಚಾಲಯ ನಿರ್ಮಾಣಕ್ಕೆ
ರು. 60 ಕೋಟಿ: ಕುಡಿಯುವ ನೀರು ಪೂರೈಕೆಗೆ
ರು.50 ಕೋಟಿ : ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗೆ
ರು.10 ಕೋಟಿ: ವಿದ್ಯುತ್ ಸಂಪರ್ಕ ವ್ಯವಸ್ಥೆಗೆ
ರು.13 ಕೋಟಿ: ಅಲ್ಪ ಸಂಖ್ಯಾತರ ಅಭಿವೃದ್ಧಿಗೆ