ಕೊನೆಗೂ ಶಾಲಾ ಶುಲ್ಕಕ್ಕೆ ಮೂಗುದಾರ
ಕೊನೆಗೂ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ...
ಬೆಂಗಳೂರು: ಕೊನೆಗೂ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಪ್ರವೇಶ ಶುಲ್ಕ ಕುರಿತಂತೆ ಕರುಡ ಪ್ರತಿ ಹೊರಡಿಸಿದೆ.
ಮಹಾನಗರ, ನಗರ, ಜಿಲ್ಲೆ, ತಾಲೂಕು ಹಾಗೂ ಗ್ರಾಮೀಣ ಪ್ರದೇಶಗಳ ಸೌಕರ್ಯ ಹಾಗೂ ಖರ್ಚು ಅವಲಂಬಿಸಿ ಈ ಶುಲ್ಕದ ಕರಡು ಪ್ರತಿ ಹೊರತರಲಾಗಿದೆ. ಶಾಲಾಡಳಿತ ಮಂಡಳಿ ಹಾಗೂ ಪೋಷಕರಿಂದ ಈ ಶುಲ್ಕ ಪ್ರಸ್ತಾವನೆ ಕುರಿತಂತೆ ಸಲಹೆ, ಆಕ್ಷೇಪಣೆ ಕೇಳಲಾಗಿದೆ.
ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಅಂತಿಮವಾಗಿ ಶುಲ್ಕ ಸಂರಚನೆ ವಿವರವನ್ನು ಹೈಕೋರ್ಟ್ಗೆ ಸಲ್ಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ 15 ಸದಸ್ಯರ ಸಮಿತಿ, ನಂತರ ರಚನೆಯಾಗಿದ್ದ ಉಪಸಮಿತಿ ವರದಿ ಆಧರಿಸಿ ಈ ಶುಲ್ಕ ಪ್ರಸ್ತಾವನೆ ಮಾಡಲಾಗಿದೆ.
ಕಳೆದ ಒಂದೂವರೆ ವರ್ಷದಿಂದ ಈ ಬಗ್ಗೆ ಪ್ರಕ್ರಿಯೆ ನಡೆಯುತ್ತಿದ್ದರೂ ನಾನಾ ಕಾರಣಗಳಿದಂ ವಿಳಂಬವಾಗುತ್ತಿತ್ತು. ಇದಲ್ಲದೇ ಜೂ.5ರಂದೆ ಕರಡು ಪ್ರತಿಗೆ ಅನುಮೋದನೆ ಸಿಕ್ಕಿದ್ದರೂ ಸಾರ್ವಜನಿಕರ ಆಕ್ಷೇಪಣೆಗೆ ಪ್ರಕಟಣೆ ಹೊರಡಿಸಲು ಬರೋಬ್ಬರಿ 5 ತಿಂಗಳು ಸಮಯ ವ್ಯರ್ಥ ಮಾಡಲಾಯಿತು. ಶಿಕ್ಷಕರ ವೇತನ ಹಾಗೂ ಶಾಲಾ ಆಡಳಿತ ಮಂಡಳಿ ನೀಡುವ ಸೌಲಭ್ಯ. ಆಧರಿಸಿ ಶುಲ್ಕ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಶುಲ್ಕಗಳು ಶಿಕ್ಷಣ ಹಕ್ಕು ಕಾಯಿದೆಯ ಶೇ.25ರ ಮೀಸಲು ಸವಲತ್ತು ಪಡೆದ ವಿದ್ಯಾರ್ಥಿಗಳಿಗೆ ಅನ್ವಯವಾಗುವುದಿಲ್ಲ.
ಅಭಿವೃದ್ಧಿ ಶುಲ್ಕಕ್ಕೂ ಮಾನದಂಡ
ಖಾಸಗಿ ಶಾಲೆಗಳಲ್ಲಿ ಅಭಿವೃದ್ಧಿ ಶುಲ್ಕ ಪಡೆಯಲು ಮಾನದಂಡ ನಿಗದಿಗೊಳಿಸಲಾಗಿದ್ದು, ಗರಿಷ್ಠ ರು.10 ಸಾವಿರ ಹಾಗೂ ಕನಿಷ್ಠ ರು.1,500 ಅಭಿವೃದ್ಧಿ ಶುಲ್ಕ ಪಡೆಯಬಹುದೆಂದು ಕರಡು ಆದೇಶದಲ್ಲಿ ಹೇಳಲಾಗಿದೆ. ಶಾಲೆಗಳನ್ನು ಎ,ಬಿ,ಸಿ,ಡಿ ಹಾಗೂ ಇ ಎಂದು ವರ್ಗೀಕರಿಸಿ ಮಾನದಂಡ ಆಧರಿಸಿ ಅಭಿವೃದ್ಧಿ ಶುಲ್ಕ ನಿಗದಿಮಾಡಲಾಗಿದೆ.