ರೈತರಿಗಿನ್ನು ಹಸು ಭಾಗ್ಯ
ಪರಿಶಿಷ್ಟರಿಗೆ ಹಾಲಿನ ಪ್ರೋತ್ಸಾಹ ಧನದಲ್ಲಿ ರು.2 ಹೆಚ್ಚು ನೀಡುವ ಯೋಜನೆಯನ್ನು ಕೈಬಿಟ್ಟಿರುವ...
ಬೆಂಗಳೂರು: ಪರಿಶಿಷ್ಟರಿಗೆ ಹಾಲಿನ ಪ್ರೋತ್ಸಾಹ ಧನದಲ್ಲಿ ರು.2 ಹೆಚ್ಚು ನೀಡುವ ಯೋಜನೆಯನ್ನು ಕೈಬಿಟ್ಟಿರುವ ಸರ್ಕಾರ, ಹೈನುಗಾರಿಕೆಯಲ್ಲಿ ಅವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅವರಿಗೆ ಎರಡು ಹಸು ಖರೀದಿಸಲು ರು.75 ಸಾವಿರ ಅನುದಾನ ನೀಡಲು ಮುಂದಾಗಿದೆ.
ರಾಜ್ಯದಲ್ಲಿರುವ 13 ಸಾವರಿ ಪರಿಶಿಷ್ಟರಿಗೆ ತಲಾ ರು.1 ಲಕ್ಷದ 'ಹಸುಭಾಗ್ಯ' ಯೋಜನೆ ರೂಪಿಸಲಾಗಿದೆ. ಪರಿಶಿಷ್ಟ ವರ್ಗದ 10 ಸಾವಿರ ಹಾಗೂ ಪರಿಶಿಷ್ಟ ಪಂಗಡದ 3 ಸಾವಿರ ಜನರಿಗೆ ಈ ವರ್ಷ ಹಸು ನೀಡಲಾಗುತ್ತದೆ.
ಇದಕ್ಕಾಗಿ ರು.104 ಕೋಟಿ ಮೀಸಲಿಡಲಾಗಿದೆ. ಎರಡು ಹಸು ಖರೀದಿಸಲು ಒಂದು ಲಕ್ಷ ರುಪಾಯಿ ಅಗತ್ಯ. ಇದರಲ್ಲಿ ರು.75 ಸಾವಿರವನ್ನು ಸರ್ಕಾರ ಅನುದಾನ (ಸಬ್ಸಿಡಿ) ನೀಡುತ್ತದೆ.
ಉಳಿದ ರು.25 ಸಾವಿರವನ್ನು ನಗದಾಗಿ ನೀಡಬೇಕು ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್. ಆಂಜನೇಯ ಮಂಗಳವಾರ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಈ ಯೋಜನೆಯನ್ನು ರೂಪಿಸಿದ್ದು, ಗ್ರಾಮ ಪಂಚಾಯಿತಿ, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಫಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ.
ಪಶು ಸಂಗೋಪನೆ ಇಲಾಖೆ ವತಿಯಿಂದ ಹಸುಗಳನ್ನು ನೀಡಲಾಗುತ್ತದೆ. ರು.25 ಸಾವಿರ ಮೊತ್ತ ಪಾವತಿಸಲು ಸಾಧ್ಯವಾಗದವರಿಗೆ ಬ್ಯಾಂಕ್ ಸಾಲ ಒದಗಿಸಲಾಗುತ್ತದೆ ಎಂದರು.
ಪ್ರತಿ ಲೀಟರ್ಗೆ ರು.2 ಪ್ರೋತ್ಸಾಹಧನ ಹೆಚ್ಚು ನೀಡಿದರೆ ಪ್ರಯೋಜನವಾಗುವುದಿಲ್ಲ. ಈ ಉದ್ಯಮದಲ್ಲಿ ತೊಡಗಿರುವ ಪರಿಶಿಷ್ಟರೇ ಕಡಿಮೆ. ಹೀಗಾಗಿ ಪರಿಶಿಷ್ಟರನ್ನು ಹೈನುಗಾರಿಕೆಯಲ್ಲಿ ಪ್ರೋತ್ಸಾಹಿಸಲು ಹಸುಗಳನ್ನು ನೀಡಲು ನಿರ್ಧರಿಸಲಾಗಿದೆ.
ಮುಂದಿನ ತಿಂಗಳಿನಿಂದ ಫಲಾನುಭವಿಗಳ ಆಯ್ಕೆ ಪ್ರಾರಂಭವಾಗಲಿದ್ದು, ದೀಪಾವಳಿ ವೇಳೆಗೆ ಹಸುಗಳನ್ನು ನೀಡಲಾಗುವುದು ಎಂದು ಸಚಿವ ಆಂಜನೇಯ ತಿಳಿಸಿದರು.
25 ಸಾವಿರ ಜನರಿಗೆ ಗಂಗಾಕಲ್ಯಾಣ
ಗಂಗಾ ಕಲ್ಯಾಣ ಯೋಜನೆಯಲ್ಲಿ ಪ್ರಸಕ್ತ ವರ್ಷ 25 ಸಾವಿರ ಬೋರ್ವೆಲ್ ಕೊರೆದು ಅವುಗಳಿಗೆ ಪಂಪ್ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ನಿರ್ಧರಿಸಲಾಗಿದೆ. 15 ಸಾವಿರ ಇದ್ದ ಗುರಿಯನ್ನು 25 ಸಾವಿರಕ್ಕೆ ಏರಿಸಲಾಗಿದೆ.
ಬೋರ್ವೆಲ್ ಕೊರೆದ ಒಂದು ತಿಂಗಳಲ್ಲಿ ಪಂಪ್, ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಈಷರತ್ತನ್ನು ಟೆಂಡರ್ನಲ್ಲೇ ಅಳವಡಿಸಲಾಗುತ್ತದೆ. ಗಂಗಾ ಕಲ್ಯಾಣ ಯೋಜನೆಗೆ ರು.600 ಕೋಟಿ ಮೀಸಲಿಡಲಾಗಿದೆ ಎಂದು ಸಚಿವರು ತಿಳಿಸಿದರು.