ನಿನ್ನೆ ಮಧ್ಯರಾತ್ರಿ ನಡೆದ ಬೆಂಗಳೂರು ಕರಗ ಮಹೋತ್ಸವ 
ಜಿಲ್ಲಾ ಸುದ್ದಿ

ಬೆಂಗಳೂರು ಕರಗ ಮಹೋತ್ಸವ ಪೂರ್ಣ

ನಗರದ ಹೃದಯ ಭಾಗವಾದ ಕೆ.ಅರ್.ಮಾರುಕಟ್ಟೆ, ಅವಿನ್ಯೂ ರಸ್ತೆ, ಕಬ್ಬನ್‌ಪಾರ್ಕ್‌ ಸುತ್ತಮುತ್ತ ಶುಕ್ರವಾರ ಮಧ್ಯರಾತ್ರಿ ಜನವೋ ಜನ...

ಬೆಂಗಳೂರು: ನಗರದ ಹೃದಯ ಭಾಗವಾದ ಕೆ.ಅರ್.ಮಾರುಕಟ್ಟೆ, ಅವಿನ್ಯೂ ರಸ್ತೆ, ಕಬ್ಬನ್‌ಪಾರ್ಕ್‌ ಸುತ್ತಮುತ್ತ ಶುಕ್ರವಾರ ಮಧ್ಯರಾತ್ರಿ ಜನವೋ ಜನ.. ಗೋವಿಂದಾ...ಗೋವಿಂದಾ... ನಾಮಸ್ಮರಣೆ. ರಾತ್ರಿಯ ತಂಪಿನಲ್ಲಿ ಮಲ್ಲಿಗೆಯ ಕಂಪು ನೆರೆದಿದ್ದ ಸಾವಿರಾರು ಜನರನ್ನು ಅಧ್ಯಾತ್ಮದತ್ತ ಕರೆದೊಯ್ಯುವಂತಿತ್ತು. ಇದು ವಿಶ್ವ ವಿಖ್ಯಾತ ಬೆಂಗಳೂರು ಕರಗ ಉತ್ಸವದ ದೃಶ್ಯ.

 ಹುಣ್ಣಿಮೆ ದಿನ ರಾತ್ರಿ ನಡೆಯುವ ಪ್ರಸಿದ್ಧ ಹೂವಿನ ಕರಗ ಮಹೋತ್ಸವಕ್ಕೆ ಲಕ್ಷಾಂತರ ಮಂದಿ ಸಾಕ್ಷಿಯಾದರು. ಕರಗ ಉತ್ಸವದಲ್ಲಿ ಭಾಗಿಯಾಗಿದ್ದ ಸಾವಿರಾರು ಮಂದಿ ಭಕ್ತಿ ಪರವಶರಾಗಿ ಕೈ ಮುಗಿಯುವುದರ ಮೂಲಕ ಧನ್ಯತೆ ಮೆರೆದರು. ಬೆಂಗಳೂರು ಧರ್ಮರಾಯನ ಕರಗವೆಂದೇ ಪ್ರಖ್ಯಾತಿ ಪಡೆದಿರುವ ಹೂವಿನ ಕರಗ ಸುಂದರ ಲೋಕವನ್ನೇ ಸೃಷ್ಟಿ ಮಾಡಿತ್ತು.

ಇದಕ್ಕೂ ಮುನ್ನ ಪ್ರತಿ ವರ್ಷದ ಧಾರ್ಮಿಕ ವಿಧಿ ವಿಧಾನಗಳು ಕರಗದ ಕುಂಟೆ ಹಾಗೂ ಶಕ್ತಿ ಪೀಠಗಳಲ್ಲಿ ನಡೆದವು.  ಮಧ್ಯರಾತ್ರಿಯ ಬೆಳದಿಂಗಳಲ್ಲಿ ಆರಂಭವಾದ ಕರಗವನ್ನು ಸರ್ವಾಲಂಕಾರ ಭೂಷಿತರಾಗಿದ್ದ ಎ. ಜ್ಞಾನೇಂದ್ರ ಹೊತ್ತು ಧರ್ಮರಾಯಸ್ವಾಮಿ ದೇವಾಲಯದ ಗರ್ಭಗುಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ತಮಟೆ ವಾದನ, ಮಂಗಳ ವಾದ್ಯಗಳು ಮೊಳಗಿದವು. ವೀರಕುಮಾರರು "ಗೋವಿಂದಾ ಗೋವಿಂದಾ' ನಾಮಸ್ಮರಣೆ ಮಾಡುತ್ತ ಖಡ್ಗಗಳನ್ನು ಹಿಡಿದು ಕರಗದದೊಂದಿಗೆ ಹೆಜ್ಜೆ ಹಾಕಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಇಡೀ ರಾತ್ರಿ ಕರಗ ಸಂಚರಿಸಿತು. ಈ ಸಂದರ್ಭದಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ಕರದ ಉತ್ಸವದ ಅಂಗವಾಗಿ ಧರ್ಮರಾಯಸ್ವಾಮಿ ದೇವಾಲಯದ ಸುತ್ತ ಮುತ್ತ ಜನ ಜಾತ್ರೆ ನೆರೆದಿತ್ತು. ಮುಂಜಾನೆ ವೇಳೆಗ ಕರಗ ಮತ್ತೆ ದೇವಾಲಯ ಪ್ರವೇಶಿಸುವುದರೊಂದಿಗೆ ಉತ್ಸವ ಪೂರ್ಣಗೊಂಡಿತು.

ದ್ರೌಪದಿ ದೇವಿಯ (ಕರಗಕರ್ತರ) ಈ ನಗರ ಪ್ರದಕ್ಷಿಣೆ ನೋಡಲೆಂದೇ ರಾಜ್ಯದ ಮೂಲೆ ಮೂಲೆಯಿಂದ ಜನ ಬಂದು ಸೇರಿದ್ದರು. ಸ್ಥಳೀಯರು ತಮ್ಮ ಮನೆ ಮಹಡಿಗಳನ್ನೇರಿ ಕರಗದ ದರ್ಶನ ಪಡೆದರು.

ಕರಗ ವೀಕ್ಷಿಸಲು ಆಗಮಿಸಿದ್ದ ಜನರ ಕುತೂಹಲ ಸಂಭ್ರಮ ಕರಗದಷ್ಟೇ ವಿಶೇಷವಾಗಿತ್ತು. ಉದ್ದನೆ ಕತ್ತಿ ಹಿಡಿದ ವೀರಕುಮಾರರು ಆಕರ್ಷಣೆಯ ಕೇಂದ್ರವಾಗಿದ್ದರು.

ಭಾವೈಕ್ಯದ ಸಂಕೇತ: ಬೆಂಗಳೂರು ಕರಗ ಎಂಬುದು ಕೋಮು ಸೌಹಾರ್ದದ ಪ್ರತೀಕ. ಕರಗಕರ್ತರು ಮಧ್ಯರಾತ್ರಿ ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ನೀಡುವುದು ಸಂಪ್ರದಾಯ. ಹಾಗೆಂದೇ ಇದು ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತ. ಅಷ್ಟೇ ಅಲ್ಲ ಹಿಂದೂಗಳ ಜತೆಗೂಡಿ ಮುಸ್ಲಿಂ ಜನಾಂಗದವರೂ ಕರಗದ ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಭಾವೈಕ್ಯತೆ ಮೆರೆದರು.

'ಕರಗ'ದ ಹಾದಿ: ಕರಗದ ಮೆರವಣಿಗೆಯು ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಳದಿಂದ ಹೊರಟು ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಅವೆನ್ಯೂ ರಸ್ತೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಪೊಲೀಸ್ ರಸ್ತೆ, ರಾಣಾಸಿಂಗ್ ಪೇಟೆ ರಸ್ತೆ, ಕಾಟನ್ ಪೇಟೆ, ಮಸ್ತಾನ್ ಸಾಬ್ ದರ್ಗಾ, ಬಳೇಪೇಟೆ, ಅಣ್ಣಮ್ಮ ದೇವಸ್ಥಾನ, ಕಿಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಕುಂಬಾರ ಪೇಟೆ, ಕಬ್ಬನ್‌ಪೇಟೆ ಮಾರ್ಗವಾಗಿ ಪುನಃ ತಿಗಳರಪೇಟೆಗೆ ಬಂದು ಸೇರಿತ್ತು.

ಜನ ಸಾಗರ: ಕರಗ ನೋಡಲು ಎಲ್ಲರಲ್ಲೂ ಕಾತುರ. ಹೀಗಾಗಿ ತಿಗಳರ ಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನದ ಹತ್ತಿರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಕರಗ ನೋಡಬೇಕೆಂಬ ಆತುರದಲ್ಲಿದ್ದ ಜನತೆ ಕರಗ ಹೊರಡುತ್ತಿದ್ದಂತೆ ಜಯಘೋಷ ಹಾಕಿದರು.

ಕರಗದ ವೇಳೆ ಯಾವುದೇ ಅನಾಹುತ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT