ಧರ್ಮದ ಹೆಸರಲ್ಲಿ ವೇಶ್ಯಾವೃತ್ತಿಗೆ ಪ್ರೋತ್ಸಾಹ
ಧರ್ಮದ ಹೆಸರಿನಲ್ಲಿ ವೇಶ್ಯಾ ವೃತ್ತಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಎಲ್ಲಾ ಧರ್ಮಗಳಲ್ಲೂ ಧಾರ್ಮಿಕ ವ್ಯಭಿಚಾರ ನಡೆಯುತ್ತಿದೆ ಎಂದು ನಿಡುಮಾಮಡಿ ಸಂಸ್ಥಾನದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮಿಜಿ ವಿಷಾದ ವ್ಯಕ್ತಪಡಿಸಿದ್ದಾರೆ...
ಬೆಂಗಳೂರು: ಧರ್ಮದ ಹೆಸರಿನಲ್ಲಿ ವೇಶ್ಯಾ ವೃತ್ತಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಎಲ್ಲಾ ಧರ್ಮಗಳಲ್ಲೂ ಧಾರ್ಮಿಕ ವ್ಯಭಿಚಾರ ನಡೆಯುತ್ತಿದೆ ಎಂದು ನಿಡುಮಾಮಡಿ ಸಂಸ್ಥಾನದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮಿಜಿ ವಿಷಾದ ವ್ಯಕ್ತಪಡಿಸಿದ್ದಾರೆ.
ಶೂದ್ರ ಸೇನೆ ಸಂಸ್ಥೆ ನಗರದಲ್ಲಿ ಬುಧವಾರ ಆಯೋಜಿಸಿದ್ದ `ಮಹಿಳಾ ಸಬಲೀಕರಣ ಸವಾಲುಗಳು' ವಿಚಾರ ಸಂಕಿರಣದಲ್ಲಿ ಮಾತನಾಡಿದರು. ವಿಶ್ವದ ಎಲ್ಲ ಧರ್ಮಗಳಲ್ಲೂ ಮಹಿಳೆಗೆ ಪುರುಷರಿಗೆ ಸಮಾನ ಪ್ರಾಧಾನ್ಯತೆ ನೀಡಿಲ್ಲ. ಬದಲಾಗಿ ಅನೇಕ ಸಂದರ್ಭಗಳಲ್ಲಿ ಮಹಿಳೆಯನ್ನು ಧರ್ಮದ ಹೆಸರಿನಲ್ಲಿ ವೇಶ್ಯಾವೃತ್ತಿಗೆ ತಳ್ಳಲಾಗುತ್ತಿದೆ. ಇದೊಂದು ಕೇವಲ ವ್ಯಭಿಚಾರವಲ್ಲದೆ ಧಾರ್ಮಿಕ ವ್ಯಭಿಚಾರ. ಅಷ್ಟೇ ಏಕೆ, ಇಸ್ಲಾಂ ಮತ್ತು ಯಹೂದಿಗಳ ಧರ್ಮಗಳಲ್ಲೂ ಮಹಿಳೆಯನ್ನು ಪಾಪದ ಸಂಕೇತವಾಗಿ ನೋಡಲಾಗುತ್ತದೆ. ಇನ್ನು ವೀರಶೈವ ಧರ್ಮದಲ್ಲಿ ಮಹಿಳೆಗೆ ಮೋಕ್ಷವಿದೆ ಎಂದು ಹೇಳಲಾಗಿದ್ದರೂ ಅಲ್ಲಿ ಮಹಿಳೆಗೆ ಗುರುವಿನ ಸ್ಥಾನ ನೀಡಲು ಅವಕಾಶವಿಲ್ಲ.
ಇನ್ನು ಜೈನ ಮತ್ತು ಬೌದ್ಧ ಧರ್ಮದಲ್ಲಿ ಮಹಿಳೆಗೆ ಮೋಕ್ಷ ಸಿಗುತ್ತದೆ ಎನ್ನುವುದನ್ನು ಒಪ್ಪುವುದೇ ಇಲ್ಲ. ಹೀಗಾಗಿ ಎಲ್ಲಾ ಧರ್ಮಗಳು ಮಹಿಳೆಗೆ ಸೂಕ್ತ ಮಹತ್ವ ನೀಡದೆ ಕೇವಲ ವ್ಯಭಿಚಾರಕ್ಕೆ ಬಳಸಿಕೊಳ್ಳುವ ಪ್ರಯತ್ನಗಳು ನಡೆದಿವೆ ಎಂದರು ಅಭಿಪ್ರಾಯಪಟ್ಟರು.
ಅಧಿಕಾರ ರಾಜಕಾರಣದಲ್ಲಿ ಪುರುಷ ಮತ್ತು ಮಹಿಳೆ ನಡುವಿನ ಶೀತಲ ಸಮರ ಹಿಂದಿನಿಂದಲೂ ನಡೆಯುತ್ತಿದ್ದು, ಇಲ್ಲಿ ಪುರುಷ ಪಾರುಪತ್ಯವೇ ಮುಂದುವರಿದಿದೆ. ಇದನ್ನು ತಪ್ಪಿಸಿ ಮಹಿಳೆ ಸರಿಸಮನಾಗಿ ನಿಲ್ಲಬೇಕಾದರೆ ಮಹಿಳೆಯರಲ್ಲಿ ಸಂಘಟಿತ ಹೋರಾಟ ಅಗತ್ಯ. ಆದರೆ ಅದು ದೊಡ್ಡ ಸವಾಲಿನ ಕೆಲಸ, ಅದು ಅಷ್ಟು ಸುಲಭವಲ್ಲ, ಬಹುಬೇಗ ಸಿಗುವುದೂ ಇಲ್ಲ ಎಂದು ನುಡಿದರು.
ಪುರುಷ ಪ್ರಧಾನ ಸಮಾಜ: ಪುರುಷ ಪ್ರಧಾನ ಸಮಾಜ ನಿರ್ಮಾಣಕ್ಕೆ ಮೂಲ ಕಾರಣ ಕುಟುಂಬ ವ್ಯವಸ್ಥೆ. ಲಿಂಗ ತಾರತಮ್ಯ ಉಗಮ ಆಗುವುದೇ ಕುಟುಂಬದಲ್ಲಿ. ಏಕೆಂದರೆ ಕುಟುಂಬದಲ್ಲಿ ಹೆಣ್ಣುಮಕ್ಕಳನ್ನು ನಿರ್ಬಂಧಿತ ಸ್ವಾತಂತ್ರ್ಯದಲ್ಲಿ ಬೆಳೆಸಲಾಗುತ್ತದೆ. ಜತೆಗೆ ಕುಟುಂಬ ವ್ಯವಸ್ಥೆಯಲ್ಲಿ ಪುತ್ರ ಸಂತಾನದ ವ್ಯಾಮೋಹವೂ ಹೆಚ್ಚು. ಇದೆಲ್ಲದರಿಂದ ಮಹಿಳೆ ಗುರಿ ಮತ್ತು ವಿಕಸನ ಎಲ್ಲವೂ ಬದಲಾಗಿ ಪುರುಷ ಪ್ರಧಾನ ವ್ಯವಸ್ಥೆ ಮುಂದುವರಿಯುತ್ತದೆ. ಇದನ್ನು ತಡೆಯ ಬೇಕಾದರೆ ಕುಟುಂಬಗಳು ಪ್ರಜ್ಞಾಪೂರ್ವಕ ಬದಲಾವಣೆಗಳನ್ನು ಬಯಸಬೇಕು. ಶೋಷಣೆಗಳನ್ನು ನಿಲ್ಲಿಸಲು ಮುಂದಾಗಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ಪ್ರಜಾ ಪರಿವರ್ತನಾ ವೇದಿಕೆಯ ಅಧ್ಯಕ್ಷ ಬಿ.ಗೋಪಾಲ್, ಸಾಂಸ್ಕೃತಿಕ ಮುಖಂಡ ಶೂದ್ರ ಶ್ರೀನಿವಾಸ್, ಪ್ರಾಧ್ಯಾಪಕಿ ಡಾ. ಸಮತಾ ದೇಶಮಾನೆ, ಜನವಾದಿ ಮಹಿಳಾ ಸಂಘಟನೆಯ ಲಕ್ಷ್ಮೀ, ಪ್ರೊ.ಕೆ.ಎಂ. ವೆಂಕಟಸ್ವಾಮಿ ರೆಡ್ಡಿ ಹಾಗೂ ಡಾ.ಸುಮಾ ಭಾಗವಹಿಸಿದ್ದರು.