ಬೆಂಗಳೂರು: ಕನ್ನಡಚಿತ್ರ ರಂಗದ ಆರಾಧ್ಯ ದೈವ, ವರನಟ ಡಾ.ರಾಜ್ ಅವರ 9ನೇ ವರ್ಷದ ಪುಣ್ಯತಿಥಿ ಭಾನುವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
ರಾಜ್ಯದ ನಾನಾ ಕಡೆಯಿಂದ ಬಂದಿದ್ದ ಸಹಸ್ರಾರು ಅಭಿಮಾನಿಗಳು ನಟನೆ, ಘೋಷಣೆ, ಗಾಯನಗಳ ಮೂಲಕ ನೆಚ್ಚಿನ ರಾಜಣ್ಣರಿಗೆ ಪೂಜೆ, ಪುಣ್ಯಕಾರ್ಯ ಗಳನ್ನು ನೆರವೇರಿಸಿದರು. ಅಭಿಮಾನದ, ಪ್ರೀತಿಯ ಶ್ರದ್ಧಾಂಜಲಿ ಸಲ್ಲಿಸಿದರು.
ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಸಮಾಧಿ ಬಳಿ ಸಮಾವೇಶಗೊಂಡ `ಅಭಿಮಾನಿ ದೇವರು'ಗಳು ದಿನವಿಡೀ ತಮ್ಮ ನೆಚ್ಚಿನ `ದೇವತಾ ಮನುಷ್ಯ'ನಿಗೆ ನಮನ ಸಲ್ಲಿಸಿದರು. ಇದೇ ವೇಳೆ, ಡಾ.ರಾಜ್ ಕುಟುಂಬದ ಸದಸ್ಯರು ಕೂಡ ಪಾರ್ವತಮ್ಮ ರಾಜ್‍ಕುಮಾರ್ ಅವರೊಂದಿಗೆ ಸಮಾಧಿಗೆ ಭೇಟಿ ನೀಡಿ, ಪೂಜೆ, ವಿಧಿವಿಧಾನಗಳನ್ನು ನೆರವೇರಿಸಿದರು.
ಇದೆಲ್ಲದರಿಂದಾಗಿ ಕಂಠೀರವದಲ್ಲಿರುವ ಡಾ. ರಾಜ್ ಸಮಾಧಿಗೆ ದೇವಸ್ಥಾನದ ಕಳೆ ಬಂದಿತು. ಪ್ರೀತಿಯ ದೇವರನ್ನು ನೋಡಲು ದೂರದ ಊರುಗಳಿಂದ ಭಾರಿ ಸಂಖ್ಯೆಯ ಭಕ್ತರು ಆಗಮಿಸಿ ಸ್ಮಾರಕದಲ್ಲಿರುವ ಡಾ.ರಾಜ್ ಭಾವಚಿತ್ರಗಳನ್ನು ನೋಡಿ ನಲಿದರು. ಕೆಲವರು ಕಣ್ಣೀರಿಟ್ಟರು. ಪೂಜಿಸಿದರು. ನಮಸ್ಕರಿಸಿದರು. ಅಲ್ಲಿ ನೀಡಿದ ಪ್ರಸಾದ ಸೇವಿಸಿ ದಿನ ಪೂರ್ತಿ ಕಳೆದರು. ಪುನೀತರಾದರು.
ಅದೇ ರೀತಿ, ಸದಾಶಿವನಗರದ ಡಾ.ರಾಜ್ ನಿವಾಸಕ್ಕೂ ಭೇಟಿ ನೀಡಿದ ಅಭಿಮಾನಿಗಳು ಅಲ್ಲಿಯೂ ರಾಜ್ ಪರವಾಗಿ ಘೋಷಣೆಗಳನ್ನು ಕೂಗಿದರು. ಹಾಡುಗಳನ್ನು ಹಾಡಿ ಸ್ಮರಿಸಿದರು. ಇದೇ ವೇಳೆ, ಸದಾಶಿವನಗರದ ಮನೆಯಲ್ಲಿ ದಿನವೀಡೀ ಅನ್ನಸಂತರ್ಪಣೆ ಮಾಡಲಾಯಿತು.
ಅಚ್ಚರಿ ಎಂದರೆ ಅಲ್ಲಿ ಬಂದಿದ್ದವರು ಬರೀ ಡಾ.ರಾಜ್ ಅಭಿಮಾನಿಗಳು ಮಾತ್ರವಲ್ಲ. ಡಾ. ರಾಜ್ ಅವರನ್ನು ಬಿನ್ನಬಿನ್ನವಾಗಿ ಅನುಕರಿಸಬಲ್ಲ ಕಲಾವಿದರೂ ಆಗಿದ್ದರು. ಅನೇಕ ಕಲಾವಿದರು ತಮ್ಮದೇ ಶೈಲಿಯಲ್ಲಿ ಡಾ.ರಾಜ್‍ಕುಮಾರ್ ಸಂಭಾಷಣೆ ಮತ್ತು ಹಾಡುಗಳನ್ನು ಮಿಮಿಕ್ರಿ ಮಾಡಿದರು. ಕೆಲವು ಅಭಿಮಾನಿಗಳು ಡಾ.ರಾಜ್ ರ 206 ಚಿತ್ರಗಳನ್ನು ಒಂದೇ ಸಮನೆ ಹೇಳುವ ಮೂಲಕ ಗಮನ ಸೆಳೆದರು.
ಕುಟುಂಬ ಪುಣ್ಯಕಾರ್ಯ
ಡಾ.ರಾಜ್ ಕುಟುಂಬ ವರ್ಗದ ಸದಸ್ಯರು ಮೂರು ದಿನಗಳ ಮುನ್ನವೇ ರಾಜ್‍ಕುಮಾರ್ ಅವರಿಗೆ ಇಷ್ಟವಾದ ತಿಂಡಿ, ತಿನಿಸುಗಳನ್ನು ತಯಾರಿಸಿದ್ದರು. ಭಾನುವಾರ ಬೆಳಗ್ಗೆ ದೂರದಲ್ಲಿದ್ದ ಕುಟುಂಬದ ಎಲ್ಲಾ ಸದಸ್ಯರು ಒಗ್ಗೂಡಿ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಸಮಾಧಿಗೆ ಆಗಮಿಸಿದರು. ಪಾರ್ತತಮ್ಮ ರಾಜ್‍ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನಿತ್ ರಾಜ್‍ಕುಮಾರ್ ಹಾಗೂ ವಿನಯ ಸೇರಿದಂತೆ ಎಲ್ಲಾ ಸದಸ್ಯರು ಸಿದ್ಧಪಡಿಸಿದ್ದ ಚಕ್ಕುಲಿ, ಕಜ್ಜಾಯ, ಲಡ್ಡು, ಮೈಸೂರು ಪಾಕ್ ನಂಥ ತರಹೇವಾರಿ ತಿಂಗಳನ್ನು ತಂದು ಸ್ಮಾರಕದ ಮುಂದೆ ನೈವೇದ್ಯವಾಗಿ ಜೋಡಿಸಿದರು. ನಂತರ ಎಲ್ಲಾ ಸದಸ್ಯರು ಸಮಾಧಿಗೆ ಪುಷ್ಪಾರ್ಚನೆ ಮಾಡಿ ನಮಸ್ಕರಿಸಿದರು. ಚಿತ್ರರಂಗದ ಗಣ್ಯರಾದ
ಥಾಮಸ್ ಡಿಸೋಜಾ, ಕೆ.ವಿ.ಚಂದ್ರಶೇಖರ್, ಸಾ.ರಾ.ಗೋವಿಂದು ಸೇರಿದಂತೆ ಬಹುತೇಕರು ರಾಜ್ ಸಮಾಧಿಗೆ ಪೂಜೆ ಸಲ್ಲಿಸಿದರು.