ಬೆಂಗಳೂರು: ಕಟ್ಟಡ ತೆರವಿಗೆ ಹೈಕೋರ್ಟ್ ತಡೆ ನೀಡಿದ್ದರೂ, ಅಧಿಕಾರಿಗಳು ಅದನ್ನು ಪಾಲಿಸದೆ ಕಟ್ಟಡದ ಗೋಡೆ ನೆಲಸಮಗೊಳಿಸಿದ ಹಿನ್ನೆಲೆಯಲ್ಲಿ ಏ.30ರೊಳಗೆ ಸರ್ಕಾರ ತಮ್ಮ
ಖರ್ಚಿನಲ್ಲಿಯೇ ಗೋಡೆ ನಿರ್ಮಿಸಿ ಕೊಡುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಸಾರಕ್ಕಿ ಕೆರೆ ಬಳಿ ಇರುವ ನಂದಿನಿ ಲೇಕ್ ವ್ಯೂ ಅಪಾರ್ಟ್‍ಮೆಂಟ್ ಒತ್ತುವರಿ ಆಗಿರುವುದಾಗಿ ತಹಸೀಲ್ದಾರ್ ನೀಡಿದ್ದ ನೋಟಿಸ್ ಪ್ರಶ್ನಿಸಿ ಅಪಾರ್ಟ್ ಮೆಂಟ್ ನಿವಾಸಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ್ದ ಹಿರಿಯ ನ್ಯಾ.ಎಸ್.ಕೆ.ಮುಖರ್ಜಿ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಕಟ್ಟಡ ತೆರವು ಹಾಗೂ ನೆಲಸಮಗೊಳಿಸದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಗುರುವಾರ ಆದೇಶಿಸಿತ್ತು. ಆದರೆ ಸಂಜೆಯೇ ಅಧಿಕಾರಿಗಳು ಹೈಕೋರ್ಟ್ ಆದೇಶ ಪಾಲಿಸದೆ, ಕಟ್ಟಡದ ಗೋಡೆ ನೆಲಸಮಗೊಳಿಸುತ್ತಿರುವುದಾಗಿ ಅಪಾರ್ಟ್ ಮೆಂಟ್ ನಿವಾಸಿಗಳು ಕೋರ್ಟ್ ಗಮನಕ್ಕೆ ತಂದಿದ್ದರು.
ಇದನ್ನು ತಿಳಿದ ವಿಭಾಗೀಯ ಪೀಠ ತಹಸೀಲ್ದಾರ್ ವರ್ತನೆಗೆ ಬೇಸತ್ತು ಶುಕ್ರವಾರ ಹೈಕೋರ್ಟ್‍ಗೆ ಖುದ್ದು ಹಾಜರಾಗುವಂತೆ ಸೂಚಿಸಿತ್ತು. ಶುಕ್ರವಾರ ವಿಚಾರಣೆ ವೇಳೆ ಹಾಜರಾದ ತಹಸೀಲ್ದಾರ್‍ಗೆ ನೆಲಸಮಗೊಳಿಸಿರುವ ಕಟ್ಟಡ ಗೋಡೆ ಸರ್ಕಾರದ ಖರ್ಚಿನಲ್ಲಿ ನಿರ್ಮಿಸಿ ಕೊಡುವಂತೆ ವಿಭಾಗೀಯ ಪೀಠ ಸೂಚಿಸಿದೆ. ಅಲ್ಲದೆ ಏ.20ರಂದು ನಂದಿನ ಲೇಕ್ ವ್ಯೂ ಅಪಾರ್ಟ್‍ಮೆಂಟ್ ಹಾಗೂ ಇತರೆ ಅರ್ಜಿದಾರರ ವಿಚಾರಣೆ ನಡೆಸಿ, ಒತ್ತುವರಿ ತೆರವು ಸಂಬಂಧಿಸಿದಂತೆ ಏ.30ರೋಳಗೆ ತಹಸೀಲ್ದಾರ್ ಸೂಕ್ತ ಆದೇಶ ಹೊರಡಿಸಬೇಕು. ಅಲ್ಲಿಯವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.