ಬೆಂಗಳೂರು: ಕಬ್ಬನ್ ಪಾರ್ಕ್‍ನಲ್ಲಿ ಶನಿವಾರ, ಭಾನುವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಪಾರ್ಕಿಂಗ್ ವ್ಯವಸ್ಥೆಯನ್ನು ನಿಷೇಧಿಸಬೇಕೆಂದು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ಆಗ್ರಹಿಸಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ವಕೀಲ ಎಸ್.ಉಮೇಶ್ ಮಾತನಾಡಿ, `ಈಗಾಗಲೇ ತೋಟಗಾರಿಕೆ ಇಲಾಖೆ ಏ.26ರಿಂದ ಸಾರ್ವಜನಿಕ ರಜಾದಿನಗಳಂದು ಪಾರ್ಕಿಂಗ್ ನಿಷೇಧಿಸುವುದಾಗಿ ತಿಳಿಸಿದೆ. ಆ ವ್ಯವಸ್ಥೆಯನ್ನು ಹಾಗೇ ಮುಂದುವರಿಸಬೇಕು' ಎಂದು ಒತ್ತಾಯಿಸಿದರು.
ಬೇಸಿಗೆ ರಜೆ ಬಂದು ಮಕ್ಕಳಿಗೆ ಆಡಲು ಸ್ಥಳವಿಲ್ಲದೆ ಬೇರೆಯ ಊರುಗಳಿಗೆ ಹೋಗುವಂತಾಗಿದೆ. ರಜೆ ದಿನಗಳಲ್ಲಿ ಪಾರ್ಕಿಂಗ್ ನಿಷೇಧಿಸಿ ಮಕ್ಕಳು ಉದ್ಯಾನದಲ್ಲಿ ಕಾಲ ಕಳೆಯಲು ಅನುವು ಮಾಡಿ ಕೊಡಬೇಕು ಎಂದು ಹೇಳಿದರು.
ಪಾರ್ಕಿಂಗ್ ನಿಷೇಧಿಸಿದಲ್ಲಿ ಉದ್ಯಾನದ ನಾನಾ ಪಕ್ಷಿ ಸಂಕುಲ, ಪರಿಸರವನ್ನು ಸಂರಕ್ಷಿಸಿದಂತಾಗುತ್ತದೆ. ಇದರೊಂದಿಗೆ ಪಾರ್ಕ್‍ನಲ್ಲಿ ಅನೇಕ ಅನಧಿಕೃತ ಕಟ್ಟಡಗಳಿದ್ದು, ಅವುಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಕ್ರಮ ಕೈಗೊಳ್ಳಬೇಕು. ಉದ್ಯಾನದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು.
ಸರ್ಕಾರ ಪಾರ್ಕಿಂಗ್ ವ್ಯವಸ್ಥೆ ನಿಷೇಧಿಸದಿದ್ದರೆ ಮೇ 1ರಂದು ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಅದರಲ್ಲಿ ನ್ಯಾಯಮೂರ್ತಿಗಳು, ನ್ಯಾಯವಾದಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ನಿವೃತ್ತ ನ್ಯಾ. ಮೈಕೆಲ್ ಎಫ್. ಸಲ್ಡಾನಾ ಮಾತನಾಡಿ, `ಕಬ್ಬನ್ ಪಾರ್ಕ್ ಸಂರಕ್ಷಣೆಗೆ ತಾವು ನ್ಯಾಯ ಮೂರ್ತಿಗಳಾಗಿದ್ದ ಸಂದರ್ಭದಲ್ಲಿ ಕೈಗೊಂಡ ತೀರ್ಮಾನಗಳನ್ನು ಗಾಳಿಗೆ ತೂರಲಾಗಿದೆ. ಇದು ಹೀಗೇ ಮುಂದು ವರೆದರೆ ಕಬ್ಬನ್ ಪಾರ್ಕ್ ರಕ್ಷಣೆ ದುಸ್ತರವಾಗುತ್ತದೆ' ಎಂದು ಎಚ್ಚರಿಸಿದರು.