ಬೆಳಗಾವಿಯ 35 ಮಂದಿ ಸುರಕ್ಷಿತ
ನೇಪಾಳ ಪ್ರವಾಸಕ್ಕೆ ತೆರಳಿದ್ದ ಬೆಳಗಾವಿ ಜಿಲ್ಲೆಯ 35 ಮಂದಿ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಆದರೆ, ಅವರೆಲ್ಲರು ಸುರಕ್ಷಿತ ಎವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ...
ಬೆಳಗಾವಿ: ನೇಪಾಳ ಪ್ರವಾಸಕ್ಕೆ ತೆರಳಿದ್ದ ಬೆಳಗಾವಿ ಜಿಲ್ಲೆಯ 35 ಮಂದಿ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಆದರೆ, ಅವರೆಲ್ಲರು ಸುರಕ್ಷಿತ ಎವಾಗಿದ್ದಾರೆ
ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಕಂಪನಿಯೊಂದರ ಉತ್ಪನ್ನಗಳ ಮಾರಾಟಗಾರರು ಮತ್ತು ಚಿಲ್ಲರೆ ಮಾರಾಟಗಾರರು ತಮ್ಮ ಕುಟುಂಬ ಸಮೇತ ನೇಪಾಳಕ್ಕೆ ಬೆಂಗಳೂರಿನ ಮೂಲಕ ಖಾಸಗಿ ಟ್ರಾವೆಲ್ಸ್ ಮೂಲಕ ತೆರಳಿದ್ದರು. ಆದರೆ, ನೇಪಾಳದಲ್ಲಿ ಪ್ರಬಲ ಭೂಕಂಪ ಉಂಟಾಗಿದ್ದರಿಂದ ಸಂಬಂಧಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಮಾಧ್ಯಮಗಳಲ್ಲಿ ಬಿತ್ತರಗೊಂಡ ಸುದ್ದಿ ಹಿನ್ನೆಲೆಯಲ್ಲಿ ಸಂಬಂಧಿಕರು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಹೈದ್ರಾಬಾದ್ ಮೂಲಕ ಸಂಜೀವಿನಿ ಆಗ್ರೋಟೆಕ್ ಕಂಪನಿಯ ಉತ್ಪನ್ನಗಳ ಮಾರಾಟಗಾರರು ಮತ್ತು ಚಿಲ್ಲರೆ ಮಾರಾಟಗಾರರಿಗಾಗಿ ಬೆಳಗಾವಿಯ ಗಣೇಶ ಆಗ್ರೋ ಪ್ರಾಯೋಜಕತ್ವದಲ್ಲಿ ಪ್ರವಾಸ ಆಯೋಜಿಸಲಾಗಿತ್ತು. ಬೆಳಗಾವಿ ಉತ್ತರ ವಲಯ ಐಜಿಪಿ ಉಮೇ ಶ್ ಕುಮಾರ್ ಅವರನ್ನು ವಿಶೇಷ ಅಧಿಕಾರಿ ಯನ್ನಾಗಿ ಸರ್ಕಾರ ನೇಮಿಸಿದ್ದು, ರಾತ್ರಿಯೇ ಪ್ರಯಾಣ ಬೆಳೆಸಿದ್ದಾರೆ.
ಕೆಲ ಗಂಟೆ ಮೊದಲೇ ಕಠ್ಮಂಡು ಬಿಟ್ಟಿದ್ರು
ಮದ್ದೂರು ತಾಲೂಕಿನ ರಾಜೇಗೌಡನ ದೊಡ್ಡಿಯ ಬಸವೇಗೌಡ, ಪತ್ನಿ ಸುಷ್ಮ, ಮಕ್ಕಳಾದ ಅಚ್ಯುತ್ ಗೌಡ, ಅಮೂಲ್ಯ, ಗುತ್ತಿಗೆದಾರ ಚೆನ್ನಪ್ಪ, ಪತ್ನಿ ಹಾಗೂ ಶಂಕರಪುರದ ಇಬ್ಬರು ಸೇರಿ 10 ಮಂದಿ ಭೂಕಂಪ ಸಂಭವಿಸುವ ಕೆಲವೇ ಗಂಟೆಗಳ ಮೊದಲು ಕಠ್ಮಂಡು ಬಿಟ್ಟಿದ್ದರು.
ದೇಗುಲದಲ್ಲಿದ್ದಾಗ ನಡುಗಿತು!
ತುಮಕೂರಿನ ಕಾಳೇನಹಳ್ಳಿ ರೇಣುಕ ಪ್ರಸಾದ್ ನೇತೃತ್ವದಲ್ಲಿ 335 ಮಂದಿ ನೇಪಾಳಕ್ಕೆ ತೆರಳಿದ್ದರು. ಮನೋಕಾಮನ ದೇಗುಲಕ್ಕೆ ತೆರಳಿದ್ದಾಗ ಭೂಮಿ ನಡುಗಿದೆ. ಆದರೆ, ತಮಗೆ ಯಾವುದೇ ಹಾನಿಯಾಗಿಲ್ಲ. ನಾವೆಲ್ಲ ಸುರಕ್ಷಿತವಾಗಿದ್ದೇವೆಂದು ರೇಣುಕಾಪ್ರಸಾದ್ ತಿಳಿಸಿದ್ದಾರೆ.
ವಾಪಸ್ ಬರ್ತಿದ್ದಾರೆ ಮೈಸೂರು ಮಂದಿ
ಮೈಸೂರು: ನೇಪಾಳದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ ವೇಳೆ ಅಲ್ಲಿದ್ದ ಮೈಸೂರಿನ 20 ಮಂದಿ ಮೊಬೈಲ್ ಸಂಪರ್ಕಕ್ಕೆ ಸಿಗದೆ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಆದರೆ ಅವರೆಲ್ಲರೂ ಸುರಕ್ಷಿತವಾಗಿದ್ದು, ಮೈಸೂರಿನತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಭೂಕಂಪದ ಬಳಿಕ ತಾವು ಸುರಕ್ಷಿತವಾಗಿರುವುದಾಗಿ ಕುಟುಂಬ ಸದಸ್ಯರಿಗೆ ಪ್ರವಾಸಿಗರು ಕರೆ ಮಾಡಿ ತಿಳಿಸಿದ್ದರು. ನಂತರ ಸಂಪರ್ಕ ಕಡಿತಗೊಂಡಿದ್ದರಿಂದ ಆತಂಕ ಶುರುವಾಗಿತ್ತು. ಆದರೆ, ಸಂಜೆ ವೇಳೆಗೆ ಫೋನ್ ಮಾಡಿ ತಾವು ಸುರಕ್ಷಿತವಾಗಿರುವುದಾಗಿ ಹಾಗೂ ನಿಗದಿತ ಸಮಯಕ್ಕೆ ಹಿಂತಿರುಗುವುದಾಗಿ ಮಾಹಿತಿ ನೀಡಿದ್ದಾರೆ.