ಬೆಂಗಳೂರು: ಪೀಣ್ಯದ ಭುವನೇಶ್ವರಿ ನಗರದಲ್ಲಿ ಕೌಟುಂಬಿಕ ವಿಚಾರವಾಗಿ ಪತಿಯೇ ಪತ್ನಿಯನ್ನು ಕೊಲೆಗೈದಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಸರೋಜಮ್ಮ(40) ಕೊಲೆಯಾದವರು. ಇವರ ಪತಿ ವೀರಣ್ಣ(50) ಎಂಬಾತನೇ ಕೃತ್ಯ ಎಸಗಿದ್ದು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಮೆಜೆಸ್ಟಿಕ್‍ನಲ್ಲಿ ಬೀದಿ ಬದಿ ವ್ಯಾಪಾರಿಯಾಗಿರುವ ವೀರಣ್ಣ ಹಾಗೂ ಸರೋಜಮ್ಮ 20 ವರ್ಷಗಳ ಹಿಂದೆ ವಿವಾಹವಾಗಿದ್ದು ದಂಪತಿಗೆ 17 ಹಾಗೂ 16 ವರ್ಷದ ಇಬ್ಬರು ಮಕ್ಕಳಿದ್ದಾರೆ.
ಬುಧವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ವೀರಣ್ಣ, ಪತ್ನಿ ಜತೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಮುದ್ದೆ ತಿರುವಲೆಂದು ಇರುವ ದೊಣ್ಣೆ ತೆಗೆದುಕೊಂಡು ಸರೋಜಮ್ಮ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಕುಸಿದು ಬಿದ್ದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದರಿಂದ ಗಾಬರಿಗೊಂಡ ಆರೋಪಿ ಹೊರಗಿನಿಂದ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದ. ಗುರುವಾರ ಬೆಳಗ್ಗೆ ಮನೆಗೆ ಬಂದ ಆರೋಪಿ, ಬಟ್ಟೆ ಬರೆ ತುಂಬಿಕೊಂಡು ಆಂಧ್ರಪ್ರದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದಾನೆ. ಅದಕ್ಕೂ ಮೊದಲು ಸಮೀಪದಲ್ಲೇ ವಾಸವಿರುವ ಸಹೋದರನಿಗೆ ಕರೆ ಮಾಡಿ ಸರೋಜಮ್ಮ ಮೃತಪಟ್ಟಿರುವ ಮಾಹಿತಿ ನೀಡಿದ್ದಾನೆ. ಕೂಡಲೇ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವೀರಣ್ಣನನ್ನು ಬಂಧಿಸಿದ್ದಾರೆ.