ಬೆಂಗಳೂರು: ಕಳೆದ ತಿಂಗಳು ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೇ ಇದ್ದುದರಿಂದ ಬರಗಾಲ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದೆ.ಇದರಿಂದ ತರಕಾರಿ, ದವಸ ಧಾನ್ಯಗಳ ಬೆಲೆ ಏರಿಕೆಯ ಭೀತಿ ಎದುರಾಗಿದೆ.
ಈ ತಿಂಗಳು ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೆ ಸುಮಾರು 28.5 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಸಂಪೂರ್ಣ ನಾಶವಾಗುವ ಸಾಧ್ಯತೆಯಿದೆ. ಕುಡಿಯುವ ನೀರಿಗೂ ತತ್ವಾರ ಉಂಟಾಗಲಿದೆ.
ಜುಲೈ 30ಕ್ಕೆ ಲಭಿಸಿದ ವರದಿ ಪ್ರಕಾರ, ರಾಜ್ಯದ 100 ತಾಲ್ಲೂಕುಗಳು ಈಗಾಗಲೇ ಮಳೆಯ ಕೊರತೆಯನ್ನು ಎದುರಿಸುತ್ತಿವೆ. ಉತ್ತರ ಒಳನಾಡಿನಲ್ಲಿ ಶೇಕಡಾ 71ರಷ್ಟು ಮಳೆ ಕೊರತೆಯುಂಟಾಗಿದ್ದು, ಮಲೆನಾಡಿನಲ್ಲಿ ಶೇಕಡಾ 53, ದಕ್ಷಿಣ ಒಳನಾಡಿನಲ್ಲಿ ಶೇಕಡಾ 46 ರಷ್ಟು ಮತ್ತು ಕರಾವಳಿಯಲ್ಲಿ ಶೇಕಡಾ 34ರಷ್ಟು ಕೊರತೆ ಉಂಟಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಂಕಿಅಂಶದಿಂದ ತಿಳಿದುಬಂದಿದೆ.
ಕಳೆದ 10 ದಿನಗಳಲ್ಲಿ ರಾಜ್ಯಾದ್ಯಂತ ಮಳೆಯ ಕೊರತೆ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ.ವಿಜಯಪುರ ಜಿಲ್ಲೆ ಶೇಕಡಾ 86ರಷ್ಟು ಮಳೆ ಕೊರತೆಯನ್ನು ಕಂಡಿದ್ದರೆ, ಕೊಪ್ಪಳ, ಬಾಗಲಕೋಟೆಗಳಲ್ಲಿ ಶೇಕಡಾ 80ರಷ್ಟು. ಮಳೆ ಕೊರತೆ ಕೃಷಿ ಮೇಲೆ ಭಾರೀ ಪರಿಣಾಮವನ್ನುಂಟುಮಾಡಿದೆ. ಪ್ರಸಕ್ತ ಮಳೆ ಋತುವಿನಲ್ಲಿ 45.78 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಬೇಕಾಗಿತ್ತು. ಆದರೆ ಕೇವಲ 37 ಲಕ್ಷ ಹೆಕ್ಟೇರ್ ಮಾತ್ರ ಬೆಳೆಯಲಾಗಿದೆ. ಆಹಾರಧಾನ್ಯಗಳಾದ ಜೋಳ, ಭತ್ತ, ರಾಗಿ, ತೊಗರಿ, ಹುರುಳಿ, ಹೆಸರು ಮತ್ತು ಸೋಯಾಬೀನ್ ನ್ನು 21.73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ.
ಬೆಳೆಗಳಿಗೆ ಸಾಕಷ್ಟು ನೀರು ಅಗತ್ಯ. ಈಗ ತೇವಾಂಶದಿಂದಾಗಿ ಬದುಕುತ್ತಿವೆ. ಇನ್ನು ಒಂದು ವಾರದೊಳಗೆ ಮಳೆ ಬಾರದಿದ್ದರೆ ಬೆಳೆಗಳು ಒಣಗಿಹೋಗುವ ಸಾಧ್ಯತೆಯಿದೆ ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನದಿಗಳಲ್ಲಿ ಮತ್ತು ಜಲಾಶಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಆದರೆ ನಾಳೆಯಿಂದ ಕರಾವಳಿ ಮತ್ತು ದಕ್ಷಿಣ ಭಾಗದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.