ಬೆಂಗಳೂರು: ಜಿಲ್ಲಾಡಳಿತ ವ್ಯಾಪ್ತಿಗೆ ಬರುವ 40 ವಾರ್ಡ್ ಗಳಲ್ಲಿ ಚುನಾವಣೆಗೆ ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ಶಂಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. 6 ವಿಧಾನಸಭಾ ಕ್ಷೇತ್ರಗಳ 40 ವಾರ್ಡ್‍ಗಳಲ್ಲಿ ಚುನಾವಣೆ ನಿರ್ವಹಣೆಯನ್ನು ಜಿಲ್ಲಾಡಳಿತ ಮಾಡಲಿದೆ ಎಂದರು.
11 ಚುನಾವಣಾಧಿಕಾರಿ, 11 ಹೆಚ್ಚುವರಿ ಚುನಾವಣಾಧಿಕಾರಿ, 40 ಸಹಾಯಕ ಚುನಾವಣಾ„ಕಾರಿ, 6 ಚುನಾವಣಾ ವೀಕ್ಷಕರು, 4 ವಿಶೇಷ ವೀಕ್ಷಕರು ಹಾಗೂ 17 ಚುನಾವಣಾ ವೆಚ್ಚದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಭ್ಯರ್ಥಿಗಳಿಗೆ ರು.5 ಲಕ್ಷ ವೆಚ್ಚದ ಮಿತಿ ಹೇರಲಾಗಿದೆ. ಶೇ.85ಕ್ಕಿಂತ ಹೆಚ್ಚು ಮತದಾನ, ಬಲಿಷ್ಠ ಅಭ್ಯರ್ಥಿ, ಹಿಂದಿನ ಚುನಾವಣೆಯಲ್ಲಿ ವಿವಾದವಾಗಿರುವಂತಹ ಸ್ಥಳಗಳನ್ನು ಪಟ್ಟಿಮಾಡಿ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗುವುದು. ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು 18,56,002 ಮತದಾರರಿದ್ದು, ಹೊಸ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಅಂತಿಮ ದಿನವಾದ ಆ.10ರವರೆಗೂ ಪಟ್ಟಿಗೆ ಹೆಸರು ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸಬಹುದು ಎಂದರು.