ಮಂಗಳೂರು: ಮಳೆಗಾಲದ ರಜೆ ಕಳೆದು ಮೀನುಗಾರಿಕೆ ಸೀಸನ್ ಶುರುವಾದರೂ ಮೀನುಗಾರರು ಸಮುದ್ರಕ್ಕೆ ಇಳಿದಿಲ್ಲ. ರಾಜ್ಯ ಸರ್ಕಾರ ಮೀನುಗಾರರ ಖಾತೆಗೆ ಡೀಸೆಲ್ ಸಬ್ಸಿಡಿ ನೇರ ಪಾವತಿ ನಿರ್ಧಾರ ವಿರುದ್ಧ ಮೀನುಗಾರರ ಅಘೋಷಿತ ಬಂದ್ ನಡೆಯುತ್ತಿದೆ. ಆ.1ರಿಂದ ಮೀನುಗಾರಿಕೆ ಅಘೋಷಿತ ಬಂದ್ ಆಗಿದ್ದು, ಇದು ಆ.5ರ ವರೆಗೆ ಮುಂದುವರಿಯಲಿದೆ. ಕರಾವಳಿಯ ಮಂಗಳೂರು, ಮಲ್ಪೆ, ಹಂಗಾರಕಟ್ಟೆ, ಗಂಗೊಳ್ಳಿ ಬಂದರುಗಳಲ್ಲಿ ಎಲ್ಲ ಬೋಟುಗಳು ದಡದಲ್ಲೇ ಲಂಗರು ಹಾಕಿವೆ.
ಪ್ರಸಕ್ತ ಮೀನುಗಾರಿಕೆ ಋತು ಕರಾವಳಿ ಯಲ್ಲಿ ಆ. 1ರಿಂದ ಆರಂಭವಾಗಬೇಕಿತ್ತು. ಇದಕ್ಕಾಗಿ ಯಾಂತ್ರೀಕೃತ ಮೀನುಗಾರಿಕೆಗೆ ದೋಣಿಗಳಿಗೆ ಮಂಜುಗಡ್ಡೆ ತುಂಬಿಸುವ ಕೆಲಸವೂ ಪ್ರಾರಂಭವಾಗಬೇಕಿತ್ತು. ಆದರೆ ಡಿಸೇಲ್ ಸಬ್ಸಿಡಿಯನ್ನು ಬೋಟು ಮಾಲಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವ ಸರ್ಕಾರದ ಕ್ರಮ ವಿರೋಧಿಸಿ ಬೋಟ್ ಗಳನ್ನು ಸಮುದ್ರಕ್ಕಿಳಿಸದೇ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಡೀಸೆಲ್ ಸಬ್ಸಿಡಿಯನ್ನು ಬ್ಯಾಂಕ್ ಖಾತೆಗೆ ಪಾವತಿ ಮಾಡುವುದರಿಂದ ಮೀನು ಗಾರರಿಗೆ ತೊಂದರೆಯಾಗುತ್ತದೆ.
ಆದಾಯ ತೆರಿಗೆಯಿಂದ ಹಿಡಿದು ಎಲ್ಲಾ ತರದ ತೆರಿಗೆಗಳನ್ನು ಪಾವತಿಸಬೇಕಾಗಿದೆ. ಈ ಬಗ್ಗೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಶಾಸಕರು, ಮಂತ್ರಿಗಳು ಕೂಡಾ ಬ್ಯಾಂಕ್ ಖಾತೆಗೆ ವರ್ಗಾಯಿಸುವುದಿಲ್ಲ ಎಂಬ ಭರವಸೆ ನೀಡಿದ್ದರು. ಈಗ ಏಕಾಏಕಿ ಡೀಸೆಲ್ ಸಬ್ಸಿಡಿಯನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ' ಎಂದು ಕರ್ನಾಟಕ ಪರ್ಸೀನ್ ಬೋಟು ಮೀನುಗಾರರ ಸಂಘ ಅಧ್ಯಕ್ಷ ನವೀನ್ ಬಂಗೇರ ತಿಳಿಸಿದ್ದಾರೆ.
ಇಳುವರಿ ಏರಿಕೆ 2013-14ನೆ ಸಾಲಿಗೆ ಹೋಲಿಸಿದರೆ ಕಳೆದ ವರ್ಷ ಹಿಡಿದ ಮೀನಿನ ಇಳುವರಿ ಯಲ್ಲಿ ಸ್ವಲ್ಪ ಪ್ರಮಾಣದ ಏರಿಕೆಯಾಗಿದೆ. ಕಳೆದ ವರ್ಷ ರೂ 1,075 ಕೋಟಿ ವೌಲ್ಯದ 1,50,525 ಮೆಟ್ರಿಕ್ ಟನ್ ಮೀನು ಹಿಡಿಯಲಾಗಿತ್ತು. 2013-14ರಲ್ಲಿ ರೂ 827 ಕೋಟಿ ಮೌಲ್ಯದ 1,48,272 ಮೆಟ್ರಕ್ ಟನ್ ಮೀನು ಹಿಡಿಯಲಾಗಿತ್ತು. ಕಳೆದ ಬಾರಿ ಹಾಗೂ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದಾಗ ಸುಮಾರು 2,000 ಮೆಟ್ರಿಕ್ ಟನ್ ಹೆಚ್ಚುವರಿ ಮೀನು ದಕ್ಷಿಣ ಕನ್ನಡ ಕರಾವಳಿ ತೀರದಲ್ಲಿ ದೊರೆತಿದೆ ಎಂದು ಮೀನುಗಾರಿಕೆ ಇಲಾಖೆಯ ಅಂಕಿ ಅಂಶ ತಿಳಿಸಿದೆ.