ಮಡಿಕೇರಿ: ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಗೌರವಾರ್ಥ ಕೊಡಗು ಜಿಲ್ಲಾ ಪಂಚಾಯಿತಿಯ 29 ಕಚೇರಿಗಳು ಭಾನುವಾರವೂ ಕಾರ್ಯನಿರ್ವಹಿಸಿ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದವು. ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಕುರ್ಮಾ ರಾವ್ ನೀಡಿದ ಸಲಹೆಯನ್ನು ಪಾಲಿಸಿದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾನುವಾರ ಎರಡು ಗಂಟೆ ಕಾಲ ಕಾರ್ಯನಿರ್ವಹಿಸಿದರು.
ಮಡಿಕೇರಿಯ ಕೋಟೆ ಆವರಣದಲ್ಲಿ ಜಿ.ಪಂ.ಅಧೀನದ ಎಲ್ಲಾ ಕಚೇರಿಗಳು ತೆರೆದಿದ್ದು, ಕಚೇರಿಗಳು ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡತಗಳ ವಿಲೇವಾರಿಯಲ್ಲಿ ತೊಡಗಿದ್ದರು. ಈ ಕುರಿತು ಮಾತನಾಡಿದ ಕುರ್ಮಾ ರಾವ್, ಎಲ್ಲರಿಗೂ ಮಾದರಿಯಾದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಗೌರವ ಸೂಚಿಸುವುದಕ್ಕಾಗಿ ತಾವು ಮಾಡಿದ ಮನವಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ.
ಒಂದು ವರ್ಷಕ್ಕೂ ಅಧಿಕ ಕಾಲ ವಿಲೇವಾರಿಯಾಗದೇ ಬಾಕಿ ಉಳಿದಿರುವ ಕಡತಗಳ ವಿಲೇವಾರಿಗೆ ಸೂಚನೆ ನೀಡಲಾಗಿದ್ದು, ಭಾನುವಾರದ ಕರ್ತವ್ಯದ ವೇಳೆ ಎಷ್ಟು ಕಡತಗಳು ವಿಲೇವಾರಿಯಾಗಿದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆಯಲಾಗುವುದು ಎಂದರು. ಗ್ರಾಮ ಪಂಚಾಯಿತಿಗಳಿಗೂ ಕಾರ್ಯ ನಿರ್ವಹಿಸಲು ಸೂಚನೆ ನೀಡಲಾಗಿದ್ದು, ಅನೇಕ ಪಂಚಾಯಿತಿಗಳು ಇದಕ್ಕೆ ಸ್ಪಂದಿಸಿವೆ ಎಂದರು.