ಬಿಬಿಎಂಪಿ ಅಖಾಡದಲ್ಲಿ ಹೋರಾಟ ಶುರು
ಚುನಾವಣೆ `ನಡೆಯುತ್ತದೆಯೇ' ಎಂಬ ಕಾರ್ಮೋಡ ಕರಗಿ, ನಿರ್ದಿಷ್ಟ `ಮತದಾನ ಹುಣ್ಣಿಮೆ' ದಿನ ಕೊನೆಗೂ ನಿಗದಿಯಾಗಿದೆ. ..
ಬೆಂಗಳೂರು: ಚುನಾವಣೆ `ನಡೆಯುತ್ತದೆಯೇ' ಎಂಬ ಕಾರ್ಮೋಡ ಕರಗಿ, ನಿರ್ದಿಷ್ಟ `ಮತದಾನ ಹುಣ್ಣಿಮೆ' ದಿನ ಕೊನೆಗೂ ನಿಗದಿಯಾಗಿದೆ. ಶತಪ್ರಯತ್ನಕ್ಕೂ `ಭಾಗ'ವಾಗದ ರಾಜಧಾನಿಯ ಆಡಳಿತ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಅಖಾಡದ ಹೋರಾಟಕ್ಕೆ ಸೋಮವಾರದಿಂದಲೇ ಮುಹೂರ್ತ. ಬೆಂಗಳೂರಿನ ಬೃಹತ್ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಮೂರು ದೊಡ್ಡ ಪಕ್ಷಗಳ ಆಟ ಶುರು. ಅದಕ್ಕೆ ಹೆಸರು ಸಲ್ಲಿಸಲು ಆ.3 ರಿಂದಲೇ ಶುಭದಿನ.
ಅಂತೂ ಕೊನೆಗೂ ಬಿಬಿಎಂಪಿಯ 198 ವಾರ್ಡ್ ಗಳಿಗೇ ಚುನಾವಣೆ ನಡೆಯುತ್ತದೆ. ಚುನಾವಣೆಯ ತಯಾರಿಗೆ ಅಭ್ಯರ್ಥಿಗಳಿಗೆ ಇನ್ನೇನು ಹೆಚ್ಚು ದಿನವೇನೂ ಉಳಿದಿಲ್ಲ. ಮುಂದಿನ ಸೋಮವಾರವೇ ನಾಮಪತ್ರ ಸಲ್ಲಿಸಲು ಕಡೆ ದಿನ. ಅಂದರೆ, ನಾಮಪತ್ರ ಸಲ್ಲಿಸುವವರೆಗೆ ಮತದಾರನಲ್ಲಿಗೆ ಇವರ ಪಯಣ ಇರುವುದಿಲ್ಲ. ಅದಕ್ಕೇ ಈಗ ಟಿಕೆಟ್ ಪಡೆದುಕೊಳ್ಳುವ ಹೋರಾಟಕ್ಕೆ ಪ್ರಥಮ ಚಾಲನೆ ದೊರೆತಿದೆ. ಕೆಲವು ವರ್ಷಗಳಿಂದ ಬೇಡಿಕೆ ಕಳೆದುಕೊಂಡಿದ್ದ ನಗರದ ನಾಯಕರಿಗೆ ಈಗ ಭಾರಿ ಡಿಮ್ಯಾಂಡ್.
ಬಿಬಿಎಂಪಿ ಹೋರಾಟ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷವಾದ ಜೆಡಿಎಸ್ಗೆ ಪ್ರತಿಷ್ಠೆಯ ಕಣ. ಇಲ್ಲಿ ತಮ್ಮ ಸಾಮಥ್ರ್ಯ ಸಾಬೀತುಪಡಿಸಿದರೆ ಮುಂದಿನ ರಾಜಕೀಯ ಹೋರಾಟ ಅಥವಾ ದಿಕ್ಸೂಚಿಗೆ ಭಾರೀ ಅನುಕೂಲ.ಹೀಗಾಗಿ ಈ ಬಾರಿಯ ಬಿಬಿಎಂಪಿ ಚುನಾವಣೆಯ ಹೋರಾಟದ ಅಖಾಡದಲ್ಲಿ ರಾಜಕೀಯ ತಂತ್ರ- ಪ್ರತಿತಂತ್ರಗಳದ್ದೇ ಮೆರುಗು. ಪಕ್ಷದ ಚಿಹ್ನೆಯ ಹೋರಾಟವಾದರೂ ವೈಯಕ್ತಿಕ ಚಾರ್ಮ್ ಕೂಡ ಅಷ್ಟೇ ಪ್ರಮುಖ. ಬಿಬಿಎಂಪಿ ರಚನೆಯಾದ ಮೇಲೆ ಪ್ರಥಮ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರಿದ ಬಿಜೆಪಿ ಇತಿಹಾಸ ರಚಿಸಿತು. ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಈ ವಿಜಯ ಸಾಕಷ್ಟು ಮೆರುಗನ್ನೂ ನೀಡಿತ್ತು. ಆದರೆ, ಐದು ವರ್ಷದ
ಆಡಳಿತದಲ್ಲಿ ಸಾಕಷ್ಟು ಏರುಪೇರುಗಳಾಗಿ, ಆಡಳಿತ ವೈಖರಿಯೂ ಟೀಕೆಗೆ ಒಳಗಾಯಿತು. ಬಿಜೆಪಿಯ ಹಿರಿಯ ನಾಯಕರೇ ಆಡಳಿತದಲ್ಲಿನ `ಹುಳುಕು'ಗಳನ್ನು ತೆಗೆದು ಬಹಿರಂಗಪಡಿಸಿದರು. ತಮ್ಮದೇ ಆಡಳಿತದ ಅದಕ್ಷತೆಯನ್ನು ದಾಖಲೆ ಸಹಿತ ಹೊರಗೆಡವಿದರು. ಇಷ್ಟಾದ ಮೇಲೂ ಮತ್ತೊಮ್ಮೆ ನಗರದಲ್ಲಿ ಬಿಜೆಪಿಗಿರುವ ಒಲವನ್ನು ಪರೀಕ್ಷಿಸಲು ಮುಂದಾಗಿದ್ದಾರೆ. ಐದು ವರ್ಷದಲ್ಲಿ ತಮ್ಮ ಆಡಳಿತ ವೈಫಲ್ಯವನ್ನು ಮರೆಸುವ ಒಂದು ಪ್ರಯತ್ನವೆಂದರೆ ಚುನಾವಣೆ ಮಾಡಿಸಲು ನ್ಯಾಯಾಂಗದಲ್ಲಿ ಹೋರಾಡಿದ್ದು. ಬಿಜೆಪಿಗೆ ಈಗ ಬಿಬಿಎಂಪಿಯನ್ನು ಮತ್ತೆ ತೆಕ್ಕೆಗೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. 111 ಸೀಟು ಗೆದ್ದು ಭಾರಿ ಬಹುಮತ ಹೊಂದ್ದಿದ ಬಿಜೆಪಿ, ಇದೀಗ ಮತ್ತೊಮ್ಮೆ ತನ್ನ ಸಾಮಥ್ರ್ಯ ಸಾಬೀತುಪಡಿಸಬೇಕಿದೆ.
ಬಿಬಿಎಂಪಿ ವ್ಯಾಪ್ತಿಯ ಮೂವರು ಸಂಸದರಲ್ಲಿ ಇಬ್ಬರು ಕೇಂದ್ರ ಸಚಿವರಾಗಿದ್ದಾರೆ. ಇನ್ನು 12 ಶಾಸಕರಿದ್ದಾರೆ. ಜತೆಗೆ ಮಂತ್ರಿಗಳಾಗಿದ್ದ, ಆಗದ ಎಂಎಲ್ಸಿಗಳೂ ಇದ್ದಾರೆ. ಹೀಗಾಗಿ ಬಿಜೆಪಿ ಮೇಲೆ ಹೆಚ್ಚಿನ ಒತ್ತಡವಿದ್ದು, ಕಾಂಗ್ರೆಸ್ ಸರ್ಕಾರ ವಿರುದ್ಧವಾದ ಜನತೆಯ ಮತವನ್ನು ಗಳಿಸಿಕೊಳ್ಳಲು ತನ್ನ ತಂತ್ರ ಮೆರೆಯುವ ಅಗತ್ಯವಿದೆ. ಇನ್ನು ಕಾಂಗ್ರೆಸ್ಗಂತೂ ತನ್ನ ಸಾಮಥ್ರ್ಯ ಸಾಬೀತುಪಡಿಸಿಕೊಳ್ಳಲು ಅತ್ಯುತ್ತಮ ಅವಕಾಶ ಇದು. ಬಿಬಿಎಂಪಿ ಚುನಾವಣೆ ನಡೆಯಬಾರದು, ಮೂರು ಅಥವಾ ಐದು ಭಾಗವಾಗಬೇಕೆಂದು ಸರ್ಕಾರವೇ ಕಾನೂನು ಹೋರಾಟ ಮಾಡಿದ್ದು ರಹಸ್ಯವಾಗೇನೂ ಉಳಿದಿಲ್ಲ. ಇದೆಲ್ಲ ಪ್ರಯತ್ನಗಳು ವಿಫಲವಾದ ಮೇಲೆ ಇದೀಗ ಅನಿವಾರ್ಯವಾಗಿ ಚುನಾವಣೆಯನ್ನು ಎದುರಿಸಬೇಕಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದು ಪ್ರತಿಷ್ಠೆಯ ಕಣವಾಗಿದ್ದು, ಇದರಲ್ಲಿ ಗೆಲವು ಸಾಧಿಸಬೇಕೆಂದೇ ಮಂತ್ರಿಗಳಿಗೊಂದು ವಿಧಾನಸಭೆ ಕ್ಷೇತ್ರದ ಹೊಣೆ ಹೊರಿಸಿದ್ದಾರೆ. ಇಂತಹ ಪ್ರಕ್ರಿಯೆ ಇಡೀ ಪಾಲಿಕೆ ಚುನಾವಣೆ ವ್ಯವಸ್ಥೆಯಲ್ಲೇ ಪ್ರಥಮ ಎನ್ನಲಾಗಿದೆ. ಮುಖ್ಯಮಂತ್ರಿ ಸೀಟು ಅಲುಗಾಡದೆ ಉಳಿಯ ಬೇಕಾದರೆ ಬಿಬಿಎಂಪಿಯ ಅಧಿಕಾರ ಗದ್ದುಗೆ ಸಿದ್ದರಾಮಯ್ಯ ಅವರಿಗೆ ಅನಿವಾರ್ಯ. ಹೀಗಾಗಿ ಅಖಾಡದಲ್ಲಿ ಸ್ವತಃ ಮುಖ್ಯಮಂತ್ರಿಯವರೇ ಇದ್ದಾರೆ. ಅಲ್ಲದೆ, 13 ಶಾಸಕರಲ್ಲಿ `ರಾಮ-ಕೃಷ್ಣ, ರಹಿಮ, ಕ್ರಿಸ್ತ' ಎಂಬಂತೆ ಎಲ್ಲ ಸಮುದಾಯಕ್ಕೂ ಒಲಿಯುವ ಐವರು ಮಂತ್ರಿಗಳ ಮೇಲೂ ತೂಗುಗತ್ತಿ ಈ ಚುನಾವಣೆ. ಸೀಟುಗಳಲ್ಲಿ 67ರಿಂದ ಶತಕ ಗಳಿಸಬೇಕಾದ ಅತ್ಯವಶ್ಯಕತೆ ಕಾಂಗ್ರೆಸ್ ಮೇಲಿದೆ. ಪ್ರಾದೇಶಿಕ ಪಕ್ಷ ಎಂದು ಹೇಳಿಕೊಳ್ಳುವ, ಗ್ರಾಮೀಣ ಭಾಗಕ್ಕೇ ಸೀಮಿತ ಎಂಬ ಹಣೆಪಟ್ಟಿ ಹೊಂದಿರುವ
ಜೆಡಿಎಸ್ ಇದೀಗ ಬೆಂಗಳೂರಿನಲ್ಲಿ ಮತ್ತೆ ತನ್ನ ಸಾಮರ್ಥ್ಯವನ್ನು ಪರೀಕ್ಷೆಗೆ ಇಡಬೇಕಿದೆ.
ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು `ಬೆಂಗಳೂರಿಗೆ ಜೆಡಿಎಸ್ ಕೊಡುಗೆ ಅಪಾರ. ಜೆಡಿಎಸ್ ನಗರಕ್ಕೆ ಮಾಡಿದ್ದಷ್ಟು ಯಾರೂ ಮಾಡಿಲ್ಲ' ಎಂದು ಒಂದು ವರ್ಷದಿಂದ ಅತಿಯಾಗೇ ಹೇಳಿಕೊಂಡು ಬರುತ್ತಿದ್ದಾರೆ. ಮೂವರು ಶಾಸಕರು ಜೆಡಿಎಸ್ನವರಾಗಿರುವುದು ಈ ಬಾರಿ ಇನ್ನಷ್ಟು ಕಾರ್ಪೋರೇಟರ್ಗಳನ್ನು ಗೆಲ್ಲಿಸಿಕೊಳ್ಳುವ ತವಕ ಹೆಚ್ಚಾಗಿದೆ. ಕೇವಲ 15ರಲ್ಲಿ ಕಳೆದ ಬಾರಿ ಗೆದ್ದಿದ್ದರೂ ದಿವಾನ್ ಅಲಿ ಸಾವಿನಿಂದ ಒಂದು ಸೀಟು ಕಳೆದುಕೊಂಡು, ಹಿರಿಯ ನಾಯಕ ಪದ್ಮನಾಭರೆಡ್ಡಿಯವರನ್ನು ಪಕ್ಷದಿಂದ ಕಳೆದುಕೊಳ್ಳುವ ಮೂಲಕ 13ಕ್ಕೆ ಸೀಮಿತವಾಗಿ ಉಳಿದ ಜೆಡಿಎಸ್ಗೆ 100 ಗಡಿ ಕಾಣುವುದು ದುಸ್ಸಾಧ್ಯವೇ ಸರಿ. ಆದರೂ, ತಾವಿಲ್ಲದೆ ಯಾರೂ ಅಧಿಕಾರ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಬೇಕೆಂಬ ಹೋರಾಟಕ್ಕೆ ಕಂಕಣಬದ್ಧವಾಗಿದೆ.
ಇನ್ನು ಆಪ್ ಸೇರಿದಂತೆ ಇನ್ನುಳಿದ ಪಕ್ಷಗಳು ತಮ್ಮ ಚುನಾವಣೆಯ ಆದ್ಯತೆಯನ್ನು ಬಹಿರಂಗಗೊಳಿಸಿಲ್ಲ. ಆಪ್ ಮೇಲೆ ಹೆಚ್ಚಿನ ಕಣ್ಣಿದ್ದರೂ ಅದು ಈ ಬಾರಿ ಚುನಾವಣೆ ಕಣಕ್ಕಿಳಿಯುವುದೇ ಇಲ್ಲ ಎಂಬ ಮಾತೂ ಇದೆ. ಮೂರು ದೊಡ್ಡ ಪಕ್ಷಗಳ ನಡುವೆ ಪೈಪೋಟಿ ನೀಡುವ `ಸಾಮಥ್ರ್ಯ'ವೂ ಇರಬೇಕಿದೆ. ಹೀಗಾಗಿ ಎಲ್ಲದ್ದಕ್ಕೂ ಅಖಾಡ ಸಿದಟಛಿವಾಗಿದೆ. ಇನ್ನು ನಾಳೆಯಿಂದ ಟಿಕೆಟ್ ಆಟ ಶುರು. ಕ್ಯೂನಲ್ಲಿ ನಿಂತೂ ಟಿಕೆಟ್ ವಂಚಿತರಾದವರು, `ಬ್ಲ್ಯಾಕ್ ಟಿಕೆಟ್' ಪಡೆದುಕೊಳ್ಳಲು ಸಾಮಥ್ರ್ಯ ಇಲ್ಲದವರು ಆ ಪಕ್ಷ ಈ ಪಕ್ಷ ಎಂದು ಕೊನೆಗೆ ಕ್ಷಣದಲ್ಲಿ ತಮ್ಮ `ಬಾವುಟ' ಬದಲಾಯಿಸುವ ಪ್ರತಿಯಾಟಕ್ಕೂ ಚಾಲನೆ ದೊರೆಯಲಿದೆ.