ಜಿಲ್ಲಾ ಸುದ್ದಿ

ಇಂದಿನಿಂದ ಬೆಂಗಳೂರು ವಿವಿ ಪಿಜಿ ಸೀಟು ಹಂಚಿಕೆ

Srinivas Rao BV

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಲಯದ 2015 -16  ನೇ ಸಾಲಿನ ಸ್ನಾತಕೋತ್ತರ ಪದವಿ ಸೀಟುಗಳ ಪ್ರವೇಶ ಪ್ರಕ್ರಿಯೆ ಇಂದಿನಿಂದ ಆರಂಭವಾಗುತ್ತಿದೆ. ರಾಜ್ಯದಲ್ಲಿ ಅತಿ ವಿಳಂಬ ಪ್ರವೇಶ ಪ್ರಕ್ರಿಯೆ ಎಂಬ ಅಪಖ್ಯಾತಿಯಿಂದ ಹೊರಬರುವ ನಿಟ್ಟಿನಲ್ಲಿ ಈ ಬಾರಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿರುವ ವಿವಿ ಕೇವಲ ನಾಲ್ಕು ದಿನದಲ್ಲಿ ಸೀಟು ಹಂಚಿಕೆ ಪೂರ್ತಿಗೊಳಿಸಿ. ಆ.10 ರಿಂದಲೇ ತರಗತಿ ಆರಂಭಿಸಲಿದೆ. ಈ ಮೂಲಕ ರಾಜ್ಯದಲ್ಲೇ ಮುಂಚೂಣಿ ವಿವಿ ಎನಿಸಿಕೊಳ್ಳುವ ನಿಟ್ಟಿಅಲ್ಲಿ ಹೆಜ್ಜೆ ಇಟ್ಟಿದೆ.

ಈ ಮೊದಲು ಸುಮಾರು 40 ದಿನಗಳು ಕೌನ್ಸೆಲಿಂಗ್ ನಡೆಯುತ್ತಿತ್ತು. ನಾವು ಈ ಹುದ್ದೆಗೇರಿದ ಮೇಲೆ ಈ ದೀರ್ಘಕಾಲೀನ ಕೌನ್ಸೆಲಿಂಗ್ ಪದ್ಧತಿ ಕೈಬಿಟ್ಟು ಶೀಘ್ರವಾಗಿ ಮುಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೆವು. ಈ ವರ್ಷ ಇತರೆ ವಿವಿಗಳಿಗಿಂತ ಪ್ರವೇಶ  ಪ್ರಕ್ರಿಯೆ ಮುಂಚಿತವಾಗಿ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ. ತಿಮ್ಮೇಗೌಡ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳಿಂದ ಅರ್ಜಿ ಸ್ವೀಕರಿಸಿದ ತರುವಾಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಅದರಂತೆ ಪ್ರವೇಶ ಪ್ರಕ್ರಿಯೆ ನಡೆಯುತ್ತದೆ. ಈ ಪಟ್ಟಿಯ ಹೊರತಾಗಿ ವೇಯ್ಟಿಂಗ್ ಲಿಸ್ಟ್ ಪಟ್ಟಿ ಸಹ ಇದ್ದು, ಮೊದಲ ಪಟ್ಟಿಯಲ್ಲಿ ಸೀಟು ಪಡೆಯದೇ ಉಳಿದ ಸೀಟನ್ನು ಎರಡನೇ ಪಟ್ಟಿಯಲ್ಲಿರುವವರಿಗೆ ನೀಡಲಾಗುತ್ತದೆ. ತಾತ್ಕಾಲಿಕ ಪಟ್ಟಿ ಪ್ರಕಟಗೊಂಡ ನಂತರ ಆಕ್ಷೇಪಣೆಗೆ ಮೂರು ದಿನಗಳ ಅವಕಾಶ ನೀಡಲಾಗಿತ್ತು ಎಂದು ತಿಮ್ಮೇಗೌಡ ತಿಳಿಸಿದ್ದಾರೆ.

ಕೌನ್ಸೆಲಿಂಗ್ ಕೇಂದ್ರದಲ್ಲೂ ಸಹ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ. ಯಾರು ಸೀಟು ಪಡೆಯಲು ಅರ್ಹತೆ ಪಡೆದುಕೊಂಡಿದ್ದಾರೆ ಯಾರು ಸೀಟು ಪಡೆದರು ಎಂಬುದು ಸಾರ್ವಜನಿಕವಾಗಿ ತಿಳಿಯುತ್ತದೆ ಈ ಮೂಲಕ ಪಾರದರ್ಶಕವಾಗಿ ಸೀಟು ಹಂಚಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.

ಸೀಟು ಹಂಚಿಕೆಗೆ ಪೂರ್ವಭಾವಿಯಾಗಿ ಕುಲಪತಿ ಪ್ರೊ.ತಿಮ್ಮೇಗೌಡ, ಕುಲಸಚಿವೆ ಸೀತಮ್ಮನವರು ಎಲ್ಲಾ ವಿಭಾಗದ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಕಳೆದ ವರ್ಷದ ಸೀಟು ಹಂಚಿಕೆ ವೇಳೆ ಕಂಡುಬಂದ ಗೊಂದಲಗಳ ಬಗ್ಗೆ ಚರ್ಚಿಸಿ ಅಂತಹ ಸಮಸ್ಯೆ ಪುನರಾವರ್ತನೆಯಾಗದಂತೆ ಎಚ್ಚರ ವಹಿಸಲು ಸಲಹೆ ನೀಡಿದ್ದಾರೆ.

SCROLL FOR NEXT