ಜಿಲ್ಲಾ ಸುದ್ದಿ

ಅಬ್ಬ, ಸದ್ಯ ಹಾಲಿನ ದರ ಏರಲ್ಲ

Srinivas Rao BV

ಬೆಂಗಳೂರು: ಕ್ಷೀರ ಕ್ರಾಂತಿಯಿಂದ ಹಾಲು ಉತ್ಪಾದಕ ಸಂಘಗಳ ಮೇಲೆ ಬಿದ್ದಿರುವ ಹೊರೆ ಕಡಿಮೆ ಮಾಡಲು ಹೈನೋತ್ಪನ್ನಗಳ ಏರಿಕೆ ಅಥವಾ ಕ್ಷೀರಭಾಗ್ಯ ಯೋಜನೆ ವಿಸ್ತರಣೆ ಪೈಕಿ ಯಾವುದು ಸೂಕ್ತ ಎಂಬ ಗೊಂದಲದಲ್ಲಿ ಸರ್ಕಾರ ಮುಳುಗಿದೆ.

ಸಿಎಂ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಹಾಲು ಉತ್ಪಾದಕರ ಪ್ರೋತ್ಸಾಹ  ಧನ ಬಿಡುಗಡೆ, ಉತ್ಪಾದಕ ಸಂಘಗಳ ನಿರ್ವಹಣಾ ವೆಚ್ಚ, ಹೆಚ್ಚುವರಿ ಉತ್ಪಾದನಾ ಸಮಸ್ಯೆ ಸೇರಿದಂತೆ ಹೈನೋದ್ಯಮದ ಸಮಸ್ಯೆ ಬಗ್ಗೆ ಚರ್ಚೆ ನಡೆಸಲು ಕರೆದಿದ್ದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ತಾತ್ಕಾಲಿಕವಾಗಿ ಸಮಸ್ಯೆಯಿಂದ ಪಾರಾಗಲು ಸರ್ಕಾರ ಕ್ಷೀರಭಾಗ್ಯ ಯೋಜನೆಯನ್ನು 5 ದಿನ ವಿಸ್ತರಿಸಲು ಸಿದ್ಧತೆ ನಡೆಸಿದೆ. ಕೆಎಂಎಫ್ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾಪದ ಹಿನ್ನೆಲೆಯಲ್ಲಿ ಹಣಕಾಸು ಹೊರೆ ಬಗ್ಗೆ ಸರ್ಕಾರ ಲೆಕ್ಕಾಚಾರ ಹಾಕಿದ್ದು ವಾರ್ಷಿಕ ರೂ.250 ಕೋಟಿ ಹೆಚ್ಚುವರಿ ಭಾರವಾಗಲಿದೆ. ಅದಾಗಿಯೂ ವಿಸ್ತರಣೆ ಅನಿವಾರ್ಯ ಎಂಬ ಅಭಿಪ್ರಾಯಕ್ಕೆ ಸರ್ಕಾರ ಬಂದಿದ್ದು ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಜತೆ ಚರ್ಚೆ ನಡೆಸಿ ಸಿಎಂ ಸಿದ್ದರಾಮಯ್ಯ ಅವರೇ ವಿಸ್ತರಣಾ ದಿನಾಂಕ ಘೋಷಿಸಲಿದ್ದಾರೆ.
 
ಹಾಲಿನ ದರ ಏರಿಕೆ ಬಗ್ಗೆ ಸರ್ಕಾರ ಚಿಂತನೆ ನಡೆಸಿಲ್ಲ ಎಂದು ಸಹಕಾರ ಸಚಿವ ಹೆಚ್.ಎಸ್ ಮಹಾದೇವ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಹಾಲಿನ ದರ ಏರಿಸುವ ನಿರ್ಧಾರ ತೆಗೆದುಕೊಂಡಿಲ್ಲ. ಹಾಲು ಉತ್ಪಾದಕ ಸಂಘಗಳಿಗೆ ಹೆಚ್ಚುವರಿ ಉತ್ಪಾದನೆಯಿಂದ ಆಗುವ ಸಮಸ್ಯೆ ತಪ್ಪಿಸಲು ಕ್ಷೀರಭಾಗ್ಯ ಯೋಜನೆಯನ್ನು 5 ದಿನಕ್ಕೆ ವಿಸ್ತರಿಸಲು ಸರ್ಕಾರ ಸದ್ಯದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

SCROLL FOR NEXT