ಬೆಂಗಳೂರು: ಗದಗ ಹಾಗೂ ಧಾರವಾಡ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಜಂತ್ಲಿ ಗ್ರಾಮದ ದೇವೇಂದ್ರಪ್ಪ ಅಡಿವೆಪ್ಪ ಪವಾಡ ಶೆಟ್ಟಿ, ಶಿರಹಟ್ಟಿ ತಾಲೂಕಿನ ಅಕ್ಕಿಗುಂದ ಗ್ರಾಮದ ಮೀರವ್ವ ಧನಸಿಂಗಪ್ಪ ಲಮಾಣಿ, ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದ ರಾಮಪ್ಪ ಧೂಳಪ್ಪ ಕಡಪಟ್ಟಿ, ಧಾರವಾಡ ತಾಲೂಕಿನ ಕಬ್ಬೆನೂರು ಗ್ರಾಮದ ಬಸವರಾಜ ರುದ್ರಪ್ಪ ಕುದರಿ ಅವರ ಮನೆಗೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಲಿದ್ದಾರೆ.
ಸಾಕ್ಷ್ಯಚಿತ್ರ: ಆತ್ಮಹತ್ಯೆಗೆ ಶರಣಾಗುತ್ತಿರುವ ರೈತ ಸಮುದಾಯದಲ್ಲಿ ಭರವಸೆ ಮೂಡಿಸಲು ರಾಜ್ಯ ಸರ್ಕಾರ ಬದುಕು-ಬೇಸಾಯ ಎಂಬ ಸಾಕ್ಷ್ಯಚಿತ್ರ ತಯಾರಿಸಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಸದಸ್ಯರ ಸಂದೇಶವನ್ನು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ವಾರ್ತಾ ಇಲಾಖೆಯಿಂದ ಈ ಸಾಕ್ಷ್ಯಚಿತ್ರ ತಯಾರಿಸಲಾಗಿದ್ದು, ಮಾನವ ಜನ್ಮ ದೊಡ್ಡದು, ರೈತರ ಜನ್ಮ ಇನ್ನೂ ದೊಡ್ಡದು, ಸಾಲಬಾಧೆ ಚಿಕ್ಕದು, ಮಕ್ಕಳ ಶಿಕ್ಷಣ ದೊಡ್ಡದು ಎಂಬ ಹಾಡಿನೊಂದಿಗೆ ಸಂದೇಶ ನೀಡಲಾಗುತ್ತಿದೆ.
ಬ್ಯಾಂಕ್‍ಗಳಿಗೆ ಸೂಚನೆ: ರೈತರ ಆತ್ಮಹತ್ಯೆ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ನನ್ನ ಬಳಿ ಶಬ್ದಗಳಿಲ್ಲ. ಒತ್ತಡಕ್ಕೆ ಸಿಲುಕಿ ಮನಸು ಕೆಡಿಸಿಕೊಂಡು ಆತ್ಮಹತ್ಯೆಗೆ ಶರಣಾಗಬೇಡಿ. ರಾಜ್ಯ ಸರ್ಕಾರ ಈಗಾಗಲೇ ರೈತರ ಸಾಲಬಾಧೆ ನಿವಾರಣೆಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಬಲಾತ್ಕಾರವಾಗಿ ಸಾಲ ವಸೂಲಿ ಮಾಡದಂತೆ ಸಹಕಾರ ಮತ್ತು ವಾಣಿಜ್ಯ ಬ್ಯಾಂಕ್‍ಗಳಿಗೆ ಸೂಚನೆ ನೀಡಲಾಗಿದೆ. ಸರ್ಕಾರ ನಿಗದಿ ಪಡಿಸಿದಕ್ಕಿಂತ ಅಧಿಕ ಬಡ್ಡಿ ವಿಧಿಸಿದರೆ ಕ್ರಮ ತೆಗೆದುಕೊಳ್ಳುವುದಾಗಿ ಖಾಸಗಿ ಲೇವಾದೇವಿಗಾರರಿಗೂ ಎಚ್ಚರಿಕೆ ನೀಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಈ ಸಾಕ್ಷ್ಯಚಿತ್ರದಲ್ಲಿ ಹೇಳಿದ್ದಾರೆ.