ಬೆಂಗಳೂರು: ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯೊಬ್ಬ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ಐದೇ ದಿನದಲ್ಲಿ ಮತ್ತೆ ಕಳವು ಪ್ರಕರಣದಲ್ಲಿ ಭಾಗಿಯಾಗಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ವಿಲಿಯಂಟೌನ್ ನಿವಾಸಿ ಜಾನ್ ಮೆಲ್ವಿನ್ ಅಲಿಯಾಸ್ ಕರಿಯಾ (40) ಬಂಧಿತ. ಈತನಿಂದ ರೂ. 15.5 ಲಕ್ಷ ಮೌಲ್ಯದ ಚಿನ್ನಾಭರಣ, 100 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ರೂ. 1 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. 40ಕ್ಕೂ ಅಧಿಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಮೆಲ್ವಿನ್ ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜು.20ರಂದು ನಡೆದ ಕನ್ನಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ.
ಈ ಹಿನ್ನೆಲೆಯಲ್ಲಿ ಜುಲೈ 21ರಂದು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಜಲೈ 24ರಂದು ಆರೋಪಿ ಬಿಡುಗಡೆಯಾಗಿದ್ದ. ಆದರೆ, ಒಂದೇ ವಾರದಲ್ಲಿ ಜಯನಗರದಲ್ಲಿ ಕಳವು ಮಾಡಿದ್ದ. ಈ ಸಂಬಂಧ ಮಾಹಿತಿ ಸಂಗ್ರಹಿಸಿದ ಸಿಸಿಬಿ ಅಧಿಕಾರಿಗಳ ತಂಡ ಆರೋಪಿಯನ್ನು ಬಂಧಿಸಿ ಚಿನ್ನಾಭರಣ, ನಗದು ವಶಪಡಿಸಿಕೊಂಡಿದ್ದಾರೆ.
ಫ್ರೇಜರ್ ಟೌನ್, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಬಾಣಸವಾಡಿ, ಜೀವನ್ ಭಿಮಾ ನಗರ, ಸಂಜಯ್ ನಗರ, ಜೆ.ಪಿ.ನಗರ, ಆರ್.ಟಿ.ನಗರ, ಉಪ್ಪಾರಪೇಟೆ, ರಾಮಮೂರ್ತಿ ನಗರ, ಯಲಹಂಕ, ಗಂಗಮ್ಮನಗುಡಿ, ಜಾಲಹಳ್ಳಿ ಮಾಗಡಿ ರಸ್ತೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಮೆಲ್ವಿನ್ ವಿರುದ್ಧ 47 ಹಗಲು ಕನ್ನ ಕಳವು ಪ್ರಕರಣಗಳು ದಾಖಲಾಗಿವೆ. ಈ ಪೈಕಿ 7 ಪ್ರಕರಣಗಳು ಮಾತ್ರ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಉಳಿದ 40 ಪ್ರಕರಣಗಳಲ್ಲಿ ಆರೋಪ ಸಾಬೀತಾಗದೆ ಆರೋಪಿ ಖುಲಾಸೆಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.