ಬೆಂಗಳೂರು: ಬಿಬಿಎಂಪಿ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಸಿದ್ಧಪಡಿಸಿರುವ ವೆಬ್‍ಸೈಟ್ ಭಾನುವಾರ ಅನಾವರಣಗೊಂಡಿತು. ಮಲ್ಲೇಶ್ವರದ ಚುನಾವಣಾ ಕಚೇರಿಯಲ್ಲಿ
ನಡೆದ ಸರಳ ಕಾರ್ಯಕ್ರಮದಲ್ಲಿ www.bjpforbbmp.org ಈ ವಿಳಾಸದ ವೆಬ್‍ಸೈಟ್ ಅನ್ನು ಬಿಜೆಪಿ ಐಟಿ ಸೆಲ್‍ನ ಸಂಚಾಲಕ ಶ್ರೀವತ್ಸ ಉದ್ಘಾಟಿಸಿದರು.
ಈ ವೇಳೆ ಮಹಾನಗರ ಬಿಜೆಪಿ ಅಧ್ಯಕ್ಷ ಸುಬ್ಬನರಸಿಂಹ, ಮಾಧ್ಯಮ ಸಮಿತಿಯ ಪ್ರಕಾಶ್ ಸೇರಿದಂತೆ ಐಟಿ ಸೆಲ್‍ನ ಪ್ರಮುಖರು ಹಾಜರಿದ್ದರು. ಈ ವೆಬ್‍ಸೈಟ್‍ನಲ್ಲಿ 2010-15ನೇ ಅವಧಿಯ ಬಿಬಿಎಂಪಿ ಅಧಿಕಾರಾವಧಿಯಲ್ಲಿ ಅನುಷ್ಠಾನಗೊಳಿಸಿ ದ ಯೋಜನೆಗಳು, ಅಭ್ಯರ್ಥಿಗಳ ವಿವರ, ಪ್ರಚಾರ ಕಾರ್ಯಕ್ರಮಗಳ ಜೊತೆಗೆ ಬಿಜೆಪಿ ಸಂಬಂಧಿಸಿದ ಇತರೆ ವೆಬ್‍ಸೈಟ್ ಲಿಂಕ್‍ಗಳನ್ನು ಅಳವಡಿಸಲಾಗಿದೆ. ಅದೇ ರೀತಿ ಚುನಾವಣೆಯಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಲು ಆಸಕ್ತರಿರುವವರು ನೋಂದಣಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಚುನಾವಣಾ ವೇಳಾಪಟ್ಟಿ, ನೀತಿ ಸಂಹಿತೆ, ವಾರ್ಡ್ ವಿವರ, ಬಿಬಿಎಂಪಿಯ ಪ್ರಮುಖ ದೂರವಾಣಿ ಸಂಖ್ಯೆ ಸೇರಿದಂತೆ ವಿವಿಧ ಮಾಹಿತಿಯನ್ನೂ ಪ್ರಕಟಿಸಲಾಗಿದೆ.
ಈಗಾಗಲೇ ಘೋಷಣೆ ಮಾಡಿರುವ ಪಕ್ಷದ ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಮಹಾನಗರ ಬಿಜೆಪಿ ಅಧ್ಯಕ್ಷ ಸುಬ್ಬ ನರಸಿಂಹ
ಇದೇ ಸಂದರ್ಭದಲ್ಲಿ ತಿಳಿಸಿದರು. ಫೇಸ್‍ಬುಕ್, ಟ್ವೀಟರ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಪ್ರಚಾರ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಕ್ಷದ ಪ್ರಣಾಳಿಕೆಯೂ ಸದ್ಯವೇ ಬಿಡುಗಡೆಯಾಗಲಿದೆ ಎಂದು ಇದೇ ಸಂದರ್ಭದಲ್ಲಿ ಸುಬ್ಬ ನರಸಿಂಹ ವಿವರಿಸಿದರು.