ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆ ಇತಿಹಾಸದಲ್ಲಿ ಮೊದಲ ಬಾರಿಗೆ ಹಿರಿಯ ಐಪಿಎಸ್ ಅಧಿಕಾರಿ ಅಮಾನತಾಗಲು ಕಾರಣವಾದ ಅಕ್ರಮ ಲಾಟರಿ ದಂಧೆ
ಪ್ರಕರಣ ಸಂಬಂಧ ಕೇಂದ್ರ ತನಿಖಾ ದಳ(ಸಿಬಿಐ) ಅಧಿಕಾರಿಗಳು ಮಂಗಳವಾರ ಎಫ್ಐಆರ್ ದಾಖಲಿಸಿದ್ದಾರೆ. ರಾಜ್ಯದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದ್ದ ಲಾಟರಿ ಪ್ರಕರಣದ ತನಿಖೆಯನ್ನು ವಿರೋಧ ಪಕ್ಷಗಳು ಹಾಗೂ ಸಾರ್ವಜನಿಕರ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ಪ್ರಕರಣ ವನ್ನು ಮೇ 26ರಂದು ಸಿಬಿಐಗೆ ವರ್ಗಾಯಿಸಿತ್ತು. ಐಪಿಸಿ ಕಲಂ 120 ಬಿ,(ಅಪರಾ ಧಿಕ ಉದ್ದೇಶ), 188(ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸುವುದು), 420 (ವಂಚನೆ) ಮತ್ತು 34(ಹಲವು ಮಂದಿ ಸೇರಿ ಸಮಾನ ಉದ್ದೇಶದ ಕೃತ್ಯ) ಲಾಟರಿ ನಿಷೇಧ ಕಾಯ್ದೆ ಕಲಂ 5 ಮತ್ತು 7 ಅನ್ವಯ ಲಾಟರಿ ದಂಧೆ ನಡೆಸುತ್ತಿದ್ದವರು ಹಾಗೂ ಇತರ ವ್ಯಕ್ತಿಗಳ ವಿರುದ್ಧ ಸಿಬಿಐ ಎಫ್ ಐಆರ್ ದಾಖಲಿಸಿಕೊಂಡಿದೆ. ಹಗರಣದ ಬಗ್ಗೆ ಕೋಲಾರದ ಕೆಜಿಎಫ್ ನ ರಾಜ್ಯ ಅಬಕಾರಿ ಮತ್ತು ಲಾಟರಿ ನಿರ್ದೇಶನಾಲಯ ಘಟಕದಲ್ಲಿ ಎಫ್ ಐಆರ್ ದಾಖಲಾಗಿತ್ತು. ಈ ಸಂಬಂಧ ಕೋಲಾರ ಲಾಟರಿ ನಿಷೇಧ ದಳದ ಅಧಿಕಾರಿಗಳು ಕಿಂಗ್ ಪಿನ್ ಎನ್ನಲಾದ ಪಾರಿರಾಜನ್‍ನನ್ನು ಬಂಧಿಸಿದ್ದರು. ಸದ್ಯ ಆರೋಪಿ ನ್ಯಾಯಾಂಗದ ವಶದಲ್ಲಿದ್ದಾನೆ.